

ದಾವಣಗೆರೆ: ಎಲ್ಲ ಮಕ್ಕಳಲ್ಲೂ ಒಂದೊಂದು ವಿಶೇಷತೆ ಇರುತ್ತದೆ. ಪಾಲಕರು ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕೆಂದು ಜಿಪಂ ಅಧ್ಯಕ್ಷೆ ದೀಪಾ ಜಗದೀಶ್ ಹೇಳಿದರು.
ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಕಾಂಪೋಸಿಟ್ ರೀಜನಲ್ ಸೆಂಟರ್‌ನಲ್ಲಿ(ಸಿಆರ್‌ಸಿ) ಶುಕ್ರವಾರ ಏರ್ಪಡಿಸಿದ್ದ ಅಡಿಪ್ಸ್ ಯೋಜನೆಯಡಿ ಬೌದ್ಧಿಕ ಅಂಗವೈಕಲ್ಯ ಹೊಂದಿರುವವರಿಗೆ ಟೀಚಿಂಗ್ ಲರ್ನಿಂಗ್ ಮಟೀರಿಯಲ್ಸ್ ಕಿಟ್ (ಟಿಎಲ್‌ಎಂ) ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೌದ್ಧಿಕ ಸಮಸ್ಯೆ ಇರುವ, ಅಂಗವಿಕಲ ಮಕ್ಕಳಿಗೆ ಈ ಕೇಂದ್ರದ ಸೌಲಭ್ಯಗಳು ದೊರೆಯಬೇಕು ಎಂದರು.
ಸಿಆರ್‌ಸಿ ನಿರ್ದೇಶಕ ಡಾ.ಜ್ಞಾನವೇಲ್ ಮಾತನಾಡಿ, ಈ ಕೇಂದ್ರದಲ್ಲಿ ಬೌದ್ಧಿಕ ಅಂಗವೈಕಲ್ಯ ಮತ್ತು ಇತರೆ ಅಂಗವಿಕಲ ಮಕ್ಕಳೊಂದಿಗೆ ಸಹನೆ, ಪ್ರೀತಿ, ವಿಶ್ವಾಸದಿಂದ ಮನವೊಲಿಸಿ ತರಬೇತಿ, ಪುನರ್ವಸತಿ ಕಲ್ಪಿಸಲಾಗುತ್ತಿದೆ. 1825 ಹೊಸಬರಿಗೆ ಮತ್ತು 112016 ಫಾಲೊ ಅಪ್ ಪ್ರಕರಣಗಳಲ್ಲಿ ಪುನರ್ವಸತಿ ಸೇವೆ ನೀಡಲಾಗಿದೆ ಎಂದು ತಿಳಿಸಿದರು.
ಅಡಿಪ್ ಯೋಜನೆಯಡಿ ಇದುವರೆಗೆ 492 ಟಿಎಲ್‌ಎಂ ಕಿಟ್ ವಿತರಣೆ ಮಾಡಲಾಗಿದೆ. 464 ಶ್ರವಣ ಸಾಧನಗಳನ್ನು ನೀಡಲಾಗಿದೆ. ಈ ಬಾರಿ ಒಟ್ಟು 87ಬೌದ್ಧಿಕ ಅಂಗವೈಕಲ್ಯ ಹೊಂದಿರುವ ಮಕ್ಕಳಿಗೆ ಟೀಚಿಂಗ್ ಲರ್ನಿಂಗ್ ಮಟೀರಿಯಲ್‌ಗಳನ್ನು ನೀಡುವ ಗುರಿಯಿದೆ ಎಂದು ಹೇಳಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಶಶಿಧರ್ ಜಿ.ಎಸ್, ಕ್ಲಿನಿಕಲ್ ಸೈಕಾಲಜಿ ವಿಭಾಗದ ಸಹ ಪ್ರಾಧ್ಯಾಪಕ ಶೇಕ್ ಯಾಸಿನ್ ಶರೀಫ್, ರಾಜು ತಲಾಥೋಟಿ, ಆಡಳಿತಾಧಿಕಾರಿ ಪಂಕಜ್ ಸಿನ್ಹಾ, ಫಲಾನುಭವಿಗಳ ಪಾಲಕರು, ಇತರೆ ಸಿಬ್ಬಂದಿ ಇದ್ದರು. ಸಿಆರ್‌ಸಿ ಪುನರ್ವಸತಿ ಅಧಿಕಾರಿ ಕನಗಸಭಾಪತಿ ನಿರೂಪಿಸಿದರು.