

ದಾವಣಗೆರೆ: ಕಳಪೆ ಬಿತ್ತನೆ ಬೀಜ ಮಾರಾಟದ ಮೇಲೆ ತೀವ್ರ ನಿಗಾ ವಹಿಸಬೇಕು. ಇಂತಹ ಪ್ರಕರಣಗಳು ಕಂಡುಬಂದರೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಕೃಷಿ ಇಲಾಖೆಯ 2020-21ನೇ ಸಾಲಿನ ಜಿಲ್ಲಾ ಮಟ್ಟದ ಟಾಸ್ಕ್‌ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಕಳಪೆ ಬಿತ್ತನೆ ಬೀಜದ ಬಗ್ಗೆ ರೈತರಿಂದ ಎಲ್ಲಿಯೂ ದೂರು ಬರಬಾರದು. ಒಂದು ವೇಳೆ ದೂರುಬಂದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಬಿತ್ತನೆ ಬೀಜ, ರಸಗೊಬ್ಬರದ ಕೊರತೆ ಆಗಬಾರದು. ಆಗಸ್ಟ್‌ವರೆಗೂ ದಾಸ್ತಾನು ಇರುವಂತೆ ಎಚ್ಚರ ವಹಿಸಬೇಕು. ಖಾಸಗಿ ಅಂಗಡಿಗಳಲ್ಲಿ ಬಿತ್ತನೆ ಬೀಜ, ರಸಗೊಬ್ಬರಗಳು ಹೆಚ್ಚಿನ ಬೆಲೆಗೆ ಮಾರಾಟ ಆಗದಂತೆ ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲು ಬಿಮಾ ಯೋಜನೆ ಹಾಗೂ ಬೆಳೆ ವಿಮಾ ಯೋಜನೆ ಜಾರಿಗೊಳಿಸಿದ್ದು, ಇದನ್ನು ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಕ್ರಮ ಕೈಗೊಳ್ಳುವಂತೆ ಸಂಬಂಧಿತರಿಗೆ ಸೂಚಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಮಾತನಾಡಿ, ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲು ಬಿಮಾ ಯೋಜನೆಯ ವ್ಯಾಪ್ತಿಗೆ ಭತ್ತ ಮತ್ತು ಮುಸುಕಿನ ಜೋಳ ಒಳಪಟ್ಟಿದ್ದು, ವಿಮಾ ಕಂತು ಪಾವತಿಸಲು ಜು. 30 ಕೊನೆಯ ದಿನ ಎಂದರು.
ರೈತರು ವಿಮೆ ಸೌಲಭ್ಯ ಪಡೆಯಲು ಜಾಗೃತಿ, ಅರಿವು ಮೂಡಿಸಬೇಕು. ಇದಕ್ಕಾಗಿ ಪ್ರಚಾರ ನೀಡಬೇಕು. ರೈತರು ಬೆಳೆ ವಿಮೆ ಪಾವತಿಗೆ ಕೊನೆಯ ದಿನದವರೆಗೆ ಕಾಯಬಾರದು ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲೆಯಲ್ಲಿ ಬೆಳೆ ನೋಂದಣಿ ಸಮರ್ಪಕವಾಗಿ ಆಗುತ್ತಿಲ್ಲ. ಇದರಲ್ಲಿ ಲೋಪವಾದರೆ ಜಿಲ್ಲಾ ಮಟ್ಟದ ಅಧಿಕಾರಿಗಳು ನೇರವಾಗಿ ಹೊಣೆಗಾರರಾಗುತ್ತಾರೆ. ಬ್ಯಾಂಕ್‌ಗಳಲ್ಲಿ ಬೆಳೆ ವಿಮೆಗೆ ಸಂಬಂಧಿಸಿದಂತೆ ಬಹಳಷ್ಟು ಅಡಚಣೆಗಳಿರುವ ದೂರುಗಳಿವೆ. ಸಾಲ ರಹಿತ ಫಲಾನುಭವಿಗಳು ಬಂದಾಗ ವಾಪಸ್ ಕಳುಹಿಸಬಾರದು ಎಂದು ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲು ಬಿಮಾ (ವಿಮಾ) ಯೋಜನೆ ಪ್ರಚಾರಕ್ಕೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಚಾಲನೆ ನೀಡಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೀವ್ ಮತ್ತಿತರರು ಹಾಜರಿದ್ದರು.
ಬಿತ್ತನೆಬೀಜ- ಗೊಬ್ಬರ ದಾಸ್ತಾನು: ಲ್ಲೆಯಲ್ಲಿ 40,381 ಕ್ವಿಂಟಾಲ್ ಬಿತ್ತನೆ ಬೀಜ ಮುಂಗಾರು ಬೇಡಿಕೆ ಇದ್ದು, 41,647 ಕ್ವಿಂಟಾಲ್ ದಾಸ್ತಾನಿದೆ. ಇದರಲ್ಲಿ 37,500 ಕ್ವಿಂಟಾಲ್ ವಿತರಿಸಲಾಗಿದೆ. 81,432 ಟನ್ ರಸಗೊಬ್ಬರ ಲಭ್ಯವಿದೆ. ಈವರೆಗೆ 52,335 ಟನ್ ಮಾರಾಟವಾಗಿದ್ದು, 29,096 ಟನ್ ದಾಸ್ತಾನಿದೆ. ಈವರೆಗೆ ರಸಗೊಬ್ಬರದ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.