ವಸತಿ ಯೋಜನೆಗೆ ಸಾಕಾಗದ ಅನುದಾನ

dvg-disha-meeting-2.jpg
Published on

  ಪಿಎಂಎವೈಗೆ ಫಲಾನುಭವಿಗಳ ನಿರಾಸಕ್ತಿ  ದಿಶಾ ಸಭೆಯಲ್ಲಿ ಚರ್ಚೆ  ವಿಜಯವಾಣಿ ಸುದ್ದಿಜಾಲ ದಾವಣಗೆರೆ  ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನೀಡುವ ಹಣ ಕಡಿಮೆಯಿದೆ. ಇದೇ ಕಾರಣಕ್ಕೆ ಫಲಾನುಭವಿಗಳು ಆಸಕ್ತಿ ತೋರಿಸುತ್ತಿಲ್ಲ. ಒಟ್ಟಾರೆ ಯೋಜನೆಯು ವಿಫಲವಾಗಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.  ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆಯಲ್ಲಿ ಮಾತನಾಡಿದರು.  ಜಿಲ್ಲೆಯ ಗ್ರಾಮೀಣ ಭಾಗದಲ್ಲಿ 26 ಸಾವಿರ ವಸತಿ ರಹಿತರನ್ನು ಗುರುತಿಸಲಾಗಿದೆ. ಅವರಲ್ಲಿ 16 ಸಾವಿರ ಜನರು ಈ ಯೋಜನೆಯಡಿ ತಮಗೆ ಆಸಕ್ತಿ ಇಲ್ಲ ಎಂದು ಹಿಂದೆ ಸರಿದಿದ್ದಾರೆ ಎಂದು ಜಿ.ಪಂ. ಸಿಇಒ ಸುರೇಶ ಇಟ್ನಾಳ್ ತಿಳಿಸಿದರು.  ಫಲಾನುಭವಿಗಳಿಗೆ ಕೇವಲ 1.20 ಲಕ್ಷ ರೂ. ನೀಡಲಾಗುತ್ತಿದ್ದು ಆ ಮೊತ್ತ ಸಾಕಾಗುವುದಿಲ್ಲ. ಇದೇ ಕಾರಣಕ್ಕೆ ಯಾರೂ ಆಸಕ್ತಿ ತೋರುತ್ತಿಲ್ಲ ಎಂದು ಸಭೆಯಲ್ಲಿ ಚರ್ಚೆಯಾಯಿತು. ಇದಕ್ಕೆ ಧ್ವನಿಗೂಡಿಸಿದ ಹೊನ್ನಾಳಿ ಶಾಸಕ ಡಿ.ಜಿ. ಶಾಂತನಗೌಡ, ಯೋಜನೆಗೆ ನೀಡುವ ಹಣ ಕಟ್ಟಡಕ್ಕೆ ಮರಳು ಹೊಂದಿಸುವುದಕ್ಕೂ ಸಾಕಾಗುವುದಿಲ್ಲ ಎಂದರು.  ಈ ಯೋಜನೆಯ ಜತೆಗೆ ರಾಜ್ಯದ ವಿವಿಧ ವಸತಿ ಯೋಜನೆಗಳ ಅನುದಾನವನ್ನೂ ಸೇರಿಸಿ ಕನಿಷ್ಠ 3 ಲಕ್ಷವಾದರೂ ನೀಡಿದರೆ ಉಳಿದ ಹಣವನ್ನು ಹೊಂದಿಸಿಕೊಂಡು ಮನೆ ಕಟ್ಟಿಕೊಳ್ಳಲು ಅನುಕೂಲವಾಗುತ್ತದೆ ಎಂದು ಪ್ರಭಾ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.  ಆರೋಗ್ಯ ಇಲಾಖೆಯ ಕುರಿತು ನಡೆದ ಚರ್ಚೆಯ ವೇಳೆ ಬಾಣಂತಿಯರ ಸಾವಿನ ವಿಚಾರವನ್ನು ಪ್ರಸ್ತಾಪಿಸಿದ ಸಂಸದೆ, ತಮಿಳುನಾಡಿನಲ್ಲಿ ಒಳ್ಳೆಯ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಇಲ್ಲಿಯೂ ಆ ರೀತಿಯ ಪ್ರಯತ್ನ ಆಗಬೇಕಿದೆ. ಸಾರ್ವಜನಿಕ-ಖಾಸಗಿ ಸಹಭಾಗಿತ್ವ, ಸಂಘ ಸಂಸ್ಥೆಗಳ ಬೆಂಬಲದೊಂದಿಗೆ ವ್ಯವಸ್ಥೆಯನ್ನು ಬಲಪಡಿಸುವ ಕಡೆಗೆ ಗಮನ ಹರಿಸಬೇಕಿದೆ ಎಂದು ಹೇಳಿದರು.  ಸ್ಮಾರ್ಟ್‌ಸಿಟಿ ಅಡಿಯಲ್ಲಿ ಇನ್ನೂ ಕೆಲಸಗಳು ಬಾಕಿ ಇರುವುದರಿಂದ ಯೋಜನೆಯ ಅವಧಿಯನ್ನು ವಿಸ್ತರಿಸುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ವೀರೇಶ ಕುಮಾರ್ ಅವರಿಗೆ ಸೂಚಿಸಿದರು.  ಎನ್.ಆರ್.ಎಲ್.ಎಂ. ಯೋಜನೆಯು ಹೆಚ್ಚು ಜನರನ್ನು ತಲುಪಬೇಕು. ಅವರ ಬದುಕಿನಲ್ಲಿ ಬದಲಾವಣೆ ತರುವಂತಿರಬೇಕು. ನಮ್ಮಲ್ಲಾಗುವ ಸಾಧನೆಯನ್ನು ರಾಜ್ಯಮಟ್ಟದಲ್ಲಿ ಗುರುತಿಸುವಂತಾಗಬೇಕು ಎಂದು ಆಶಿಸಿದರು.  ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಹೆಚ್ಚುವರಿ ಎಸ್ಪಿ ಮಂಜುನಾಥ್ ಇದ್ದರು.  ...  * ಜೀವ ರಕ್ಷಣೆಗೆ ಇರಲಿ ಆದ್ಯತೆ  ಗುಡ್ಡಗಾಡು ಪ್ರದೇಶ, ಸೌಲಭ್ಯಗಳಿಲ್ಲದ ಕಡೆಗಳಲ್ಲಿ ಕೆಲವು ಗರ್ಭಿಣಿಯರ ಆರೋಗ್ಯ ಆತಂಕಕಾರಿ ಆಗಿರುತ್ತದೆ. ಅಂಥವರನ್ನು ಗುರುತಿಸಿ, ಅವರಿಗೆ ಅಗತ್ಯ ಮಾರ್ಗದರ್ಶನ, ನೆರವು ನೀಡುವ ಮೂಲಕ ತಾಯಿ ಹಾಗೂ ಶಿಶು ಮರಣವನ್ನು ತಪ್ಪಿಸುವ ನಿಟ್ಟಿನಲ್ಲಿ ಕೆಲಸ ಆಗಬೇಕು ಎಂದು ತಿಳಿಸಿದರು.  ಜಿಲ್ಲಾಸ್ಪತ್ರೆಯಲ್ಲಿ ಸೌಲಭ್ಯಗಳಿರುವಂತೆ ನೋಡಿಕೊಳ್ಳಬೇಕು. ಶವಾಗಾರಕ್ಕೆ ಹೊಸ ಕಟ್ಟಡದ ಅಗತ್ಯವಿದೆ ಎಂದು ಹೇಳಿದರು. ಬೇಸಿಗೆಯಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.  ...  * ಹೊರಗುತ್ತಿಗೆ ನೌಕರರ ಸೊಸೈಟಿ  ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುವ ಹೊರಗುತ್ತಿಗೆ ನೌಕರರ ಮೇಲೆ ನಡೆಯುತ್ತಿರುವ ಶೋಷಣೆ ತಪ್ಪಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಸೊಸೈಟಿ ರಚಿಸಲಾಗುತ್ತಿದೆ ಎಂದು ಜಿ.ಪಂ. ಸಿಇಒ ಸುರೇಶ ಇಟ್ನಾಳ್ ಹೇಳಿದರು.  ಎಲ್ಲ ಹೊರಗುತ್ತಿಗೆ ನೌಕರರನ್ನು ಆ ಸಂಘದ ವ್ಯಾಪ್ತಿಗೆ ತರಲಾಗುವುದು. ಇದರಿಂದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ತಪ್ಪಲಿವೆ. ಏಜೆನ್ಸಿಗಳ ಹಾವಳಿ ಇರುವುದಿಲ್ಲ. ರಾಜ್ಯದಲ್ಲಿ ಬೀದರ್, ರಾಯಚೂರು ನಂತರ ನಮ್ಮ ಜಿಲ್ಲೆಯಲ್ಲೇ ಇಂಥ ವ್ಯವಸ್ಥೆ ಜಾರಿಗೆ ಬರುತಿದೆ ಎಂದು ತಿಳಿಸಿದರು.  ಮಹಾನಗರ ಪಾಲಿಕೆ ಮೇಯರ್ ಕೆ. ಚಮನ್ ಸಾಬ್ ಮಧ್ಯ ಪ್ರವೇಶಿಸಿ, ಪಾಲಿಕೆ ವ್ಯಾಪ್ತಿಯಲ್ಲಿ 500 ಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರಿದ್ದಾರೆ. ಅಲ್ಲಿನ ವ್ಯವಸ್ಥೆಯನ್ನು ಗಮನಿಸಿದರೆ ದೊಡ್ಡ ಹಗರಣವೇ ಇದೆ ಎಂದರು.  ...  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net