ವಿದ್ಯಾರ್ಥಿಗಳ ಶೈಕ್ಷಣಿಕ ಸಾಲಕ್ಕೆ ಬೇಡ ಷರತ್ತು

dvg-disha-meeting.jpg
Published on

ದಾವಣಗೆರೆ : ಪ್ರತಿಭಾನ್ವಿತ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್‌ಗಳ ವ್ಯಾಸಂಗಕ್ಕೆ ಹೋಗಲು ಬ್ಯಾಂಕ್‌ಗಳಿಂದ ಯಾವುದೇ ಷರತ್ತುಗಳಿಲ್ಲದೇ ಶೈಕ್ಷಣಿಕ ಸಾಲ ಕೊಡಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸೂಚನೆ ನೀಡಿದರು.  ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ‘ದಿಶಾ’ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.  ಕೆಲವು ಬ್ಯಾಂಕ್‌ಗಳು ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಲವನ್ನೇ ನೀಡುವುದಿಲ್ಲ. ಬಿಇ ಅಂತಿಮ ವರ್ಷದಲ್ಲಿ ಓದುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿಯೊಬ್ಬಳಿಗೆ ತಂದೆ, ತಾಯಿ ಇಲ್ಲ. ಆಕೆಯ ಪ್ರವೇಶ ಕೈಬಿಟ್ಟು ಹೋಗಿರುವುದು ಕೇಳಿ ನೋವುಂಟಾಯಿತು. ಈ ನಿಟ್ಟಿನಲ್ಲಿ ಬ್ಯಾಂಕ್ ಅಧಿಕಾರಿಗಳಿಗೆ ಲೀಡ್ ಬ್ಯಾಂಕ್‌ನಿಂದ ಸರಿಯಾದ ನಿರ್ದೇಶನ ನೀಡಬೇಕು ಎಂದು ತಿಳಿಸಿದರು.  ವಿವಿಧ ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಾಶನ ನೀಡಲಾಗುತ್ತಿದೆ, ಆದರೆ ಬ್ಯಾಂಕ್‌ನವರು ಅವರ ಸಾಲಕ್ಕೆ ಮುರಿದುಕೊಳ್ಳುತ್ತಿದ್ದಾರೆ ಎಂಬ ದೂರುಗಳಿವೆ. ಮಾಸಾಶನವನ್ನು ಅವರ ಜೀವನ ನಿರ್ವಹಣೆಗಾಗಿ ಸರ್ಕಾರ ನೀಡುತ್ತಿದೆ. ಈ ಹಣವನ್ನು ಅವರ ಸಾಲಕ್ಕೆ ಜಮಾ ಮಾಡಿಕೊಳ್ಳುವ ಕ್ರಮ ಸರಿಯಲ್ಲ ಎಂದರು.  ಸಾಲಕ್ಕೆ ಹಣ ಮುರಿದುಕೊಂಡ ಒಂದು ಶಾಖೆಯ ಬ್ಯಾಂಕ್ ಮ್ಯಾನೇಜರ್ ಬಗ್ಗೆ ಆರ್.ಬಿ.ಐ.ಗೆ ವರದಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು. ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂತ್ ಇನ್ನಿತರ ಅಧಿಕಾರಿಗಳು ಇದ್ದರು.  ...    (ಬಾಕ್ಸ್)  ಮಹಿಳೆಯರ ರಕ್ಷಣೆಗೆ ಆದ್ಯತೆ  ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಮಹಿಳಾ ರಕ್ಷಣೆಗೆ ಮೊದಲ ಆದ್ಯತೆ ನೀಡಲಾಗುವುದು. ಈ ನಿಟ್ಟಿನಲ್ಲಿ ಸಿಸಿಟಿವಿ ಕ್ಯಾಮರಾಗಳ ಜತೆಗೆ ದುರ್ಗಾಪಡೆ ಹೆಚ್ಚಿಸಬೇಕೆಂದು ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.  ಜನರು ಶಾಂತಿ, ನೆಮ್ಮದಿಯಿಂದಿರಲು ಕಾನೂನು, ಸುವ್ಯವಸ್ಥೆ ಚೆನ್ನಾಗಿರಬೇಕು. ವೈದ್ಯರು, ಮಹಿಳೆಯರು ಹಾಗೂ ಸಾರ್ವಜನಿಕರ ಸುರಕ್ಷತೆ ಬಹಳ ಮುಖ್ಯವಾಗಿದ್ದು ಇದಕ್ಕಾಗಿ ಜಿಲ್ಲೆಯ ಎಲ್ಲ ನಗರ, ಪಟ್ಟಣಗಳಲ್ಲಿ ಸಿಸಿ ಕ್ಯಾಮರಾಗಳನ್ನು ಹೆಚ್ಚು ಅಳವಡಿಸಬೇಕು ಎಂದರು.  ಮುಂದಿನ ದಿನಗಳಲ್ಲಿ ದಸರಾ ಹಬ್ಬ ಸೇರಿದಂತೆ ಅನೇಕ ಕಡೆ ಗಣೇಶ ಮೂರ್ತಿ ವಿಸರ್ಜನೆ ಇರುವುದರಿಂದ ಹೆಚ್ಚಿನ ನಿಗಾ ವಹಿಸಬೇಕು. ಸರಗಳ್ಳತನ, ಮಹಿಳೆಯರು ಒಂಟಿಯಾಗಿ ಹೋಗುವಾಗ ಬೆದರಿಕೆ ಒಡ್ಡುವವರ ಮೇಲೆ ನಿಗಾ ವಹಿಸಬೇಕು ಎಂದು ತಿಳಿಸಿದರು.  ವೈದ್ಯರ ಸುರಕ್ಷತೆಗಾಗಿ ಚಿಗಟೇರಿ ಆಸ್ಪತ್ರೆ ಸೇರಿದಂತೆ ಅಗತ್ಯವಿರುವ ಕಡೆ ಸಿಸಿ ಕ್ಯಾಮರಾ ಅಳವಡಿಸಬೇಕು. ರಾತ್ರಿ ವೇಳೆ ಹೆಚ್ಚಿನ ಬಂದೋಬಸ್ತ್ ಮಾಡಬೇಕು ಎಂದು ತಾಕೀತು ಮಾಡಿದರು.  ಗ್ರಾಮೀಣ, ನಗರ, ಪಟ್ಟಣ ಪ್ರದೇಶದಲ್ಲಿನ ಓವರ್‌ಹೆಡ್ ಟ್ಯಾಂಕ್‌ಗಳ ಸ್ವಚ್ಛತೆ ಕೈಗೊಳ್ಳಬೇಕು. ಕಾಲ ಕಾಲಕ್ಕೆ ನೀರಿನ ಪರೀಕ್ಷೆ ಮಾಡಿಸಬೇಕು. ಹೊನ್ನಾಳಿ ತಾಲೂಕು ಕತ್ತಿಗೆ ಗ್ರಾಮಕ್ಕೆ ಹೋದಾಗ ಅಲ್ಲಿನ ನೀರಿನಲ್ಲಿ ಫ್ಲೋರೈಡ್ ಅಂಶ ಹೆಚ್ಚಿರುವ ಬಗ್ಗೆ ಸ್ಥಳೀಯರು ಗಮನಕ್ಕೆ ತಂದಿದ್ದಾರೆ ಎಂದರು. ಸಿಇಒ ಸುರೇಶ ಬಿ. ಇಟ್ನಾಳ್ ಪ್ರತಿಕ್ರಿಯಿಸಿ ಆ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ನೀಡಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net