ನಿಯಮ ಉಲ್ಲಂಘಿಸುವ ವಾಹನಗಳ ಮೇಲೆ ಕಣ್ಣು

dvg-lane-discipline.jpg
Published on

ರಮೇಶ ಜಹಗೀರದಾರ್ ದಾವಣಗೆರೆ :  ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಗದಿತ ಲೇನ್‌ನಲ್ಲಿ ಸಂಚರಿಸದೇ (ಲೇನ್ ಡಿಸಿಪ್ಲಿನ್) ನಿಯಮ ಉಲ್ಲಂಘಿಸುವ ವಾಹನಗಳನ್ನು ಸ್ಮಾರ್ಟ್‌ಸಿಟಿಯ ಇಂಟಿಗ್ರೇಟೆಡ್ ಕಮ್ಯಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‌ನಿಂದ (ಐಸಿಸಿಸಿ) ಗಮನಿಸಿ ದಂಡ ವಿಧಿಸುವ ವ್ಯವಸ್ಥೆಯನ್ನು ಪೊಲೀಸ್ ಇಲಾಖೆ ಜಾರಿಗೆ ತಂದಿದೆ.  ಇದುವರೆಗೆ ಪೊಲೀಸ್ ಸಿಬ್ಬಂದಿ ಹೆದ್ದಾರಿಯಲ್ಲಿ (ಟೋಲ್ ಬಳಿ) ನಿಂತು, ನಿಯಮ ಉಲ್ಲಂಘಿಸುವ ವಾಹನಗಳನ್ನು ತಡೆದು ನಿಲ್ಲಿಸಬೇಕಿತ್ತು. ಒಬ್ಬರು ಪಿಎಸ್‌ಐ ಅಥವಾ ಎಎಸ್‌ಐ, ಕಾನ್‌ಸ್ಟೇಬಲ್‌ಗಳು ಹಾಗೂ ವಾಹನ ಚಾಲಕ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.  ಹೆದ್ದಾರಿಯಲ್ಲಿ ವಾಹನಗಳು ವೇಗವಾಗಿ ಸಂಚರಿಸುವುದರಿಂದ ಅವುಗಳನ್ನು ತಡೆದು ನಿಲ್ಲಿಸಿ, ದಂಡ ವಸೂಲಿ ಮಾಡುವ ಕೆಲಸ ಅಷ್ಟು ಸುಲಭವಲ್ಲ. ನಗರ ಸಮೀಪದ ಹೆಬ್ಬಾಳು ಟೋಲ್ ಬಳಿ ಇತ್ತೀಚೆಗೆ ಕರ್ತವ್ಯನಿರತ ಸಿಬ್ಬಂದಿಯೊಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದರು. ಈ ದುರ್ಘಟನೆಯ ನಂತರ ಇಲಾಖೆಯು ಪರ್ಯಾಯ ವ್ಯವಸ್ಥೆ ಮಾಡಿಕೊಂಡಿದೆ.  ಪೊಲೀಸರು ಹೆದ್ದಾರಿ ಬದಿಯಲ್ಲಿ ನಿಂತಾಗ ಅಪಾಯಕ್ಕೀಡಾಗುವ ಸಾಧ್ಯತೆ ಇರುತ್ತದೆ. ಸಿಬ್ಬಂದಿಯನ್ನು ಅಲ್ಲಿ ನಿಯೋಜಿಸುವ ಬದಲು ಸ್ಮಾರ್ಟ್‌ಸಿಟಿಯ ಇಂಟಿಗ್ರೇಟೆಡ್ ಕಮ್ಯಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‌ನಿಂದ (ಐಸಿಸಿಸಿ) ಗಮನಿಸಿ ದಂಡ ವಿಧಿಸಲಾಗುತ್ತಿದೆ.  ...

   (ಬಾಕ್ಸ್)  

300 ಪ್ರಕರಣ ದಾಖಲು

 ಕಳೆದ ಐದಾರು ದಿನಗಳಲ್ಲಿ ಲೇನ್‌ಡಿಸಿಪ್ಲಿನ್ ಉಲ್ಲಂಘನೆಯ 300 ಪ್ರಕರಣಗಳನ್ನು ದಾಖಲಿಸಲಾಗಿದೆ.  ಹೆಬ್ಬಾಳು ಟೋಲ್ ಗೇಟ್ ಮತ್ತು ಬಾಡಾ ಕ್ರಾಸ್ ಸಮೀಪ ಹೆದ್ದಾರಿಯಲ್ಲಿರುವ ಕ್ಯಾಮರಾಗಳನ್ನು ಸ್ಮಾರ್ಟ್‌ಸಿಟಿ ಕಚೇರಿಯ ಐಸಿಸಿಸಿಗೆ ಸಂಪರ್ಕಿಸಲಾಗಿದೆ. ಇದರಿಂದಾಗಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳನ್ನು ಕುಳಿತಲ್ಲಿಂದಲೇ ಗಮನಿಸಬಹುದಾಗಿದೆ. ಅಲ್ಲಿರುವ ಅತ್ಯಾಧುನಿಕ ಕ್ಯಾಮರಾಗಳ ಸಹಾಯದಿಂದ ನಿಯಮ ಉಲ್ಲಂಘನೆಯನ್ನು ಪತ್ತೆಹಚ್ಚಲಾಗುತ್ತಿದೆ. ಸುಮಾರು 7 ಜನ ಸಿಬ್ಬಂದಿ ಈ ಕರ್ತವ್ಯ ನಿರ್ವಹಿಸುತ್ತಾರೆ.  ರಾಷ್ಟ್ರೀಯ ಹೆದ್ದಾರಿಯಲ್ಲಿ 1ನೇ ಲೇನ್‌ನಲ್ಲಿ ವೇಗದ ವಾಹನಗಳು, ಕಾರುಗಳು ಸಂಚರಿಸಬೇಕು. 2 ಮತ್ತು 3ನೇ ಲೇನ್‌ನಲ್ಲಿ ಬಸ್ ಹಾಗೂ ಲಾರಿಗಳು ಹೋಗಬೇಕು. ಲಾರಿಗಳು 1ನೇ ಲೇನ್ ಪ್ರವೇಶಿಸಿದರೆ ನಿಯಮ ಉಲ್ಲಂಘನೆಯಾಗುತ್ತದೆ.  ನಿಯಮ ಉಲ್ಲಂಘನೆ ಮಾಡಿರುವುದರಿಂದ 500 ರೂ. ದಂಡ ಪಾವತಿಸುವಂತೆ ಅಂಥ ವಾಹನಗಳ ಮಾಲೀಕರ ದೂರವಾಣಿ ಸಂಖ್ಯೆಗೆ ಮೆಸೇಜ್ ಕಳಿಸಲಾಗುತ್ತದೆ. ಅವರು ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ, ಯಾವುದಾದರೂ ಅಂಚೆ ಕಚೇರಿಯಲ್ಲಿ ಅಥವಾ ಸಂಚಾರ ಪೊಲೀಸರ ಬಳಿ ತೆರಳಿ ಒಂದು ತಿಂಗಳೊಳಗೆ ದಂಡ ಪಾವತಿಸಬೇಕು.  ದಂಡ ಪಾವತಿ ಮಾಡದಿದ್ದರೆ 84 ದಿನಗಳ ನಂತರ ಮತ್ತೊಂದು ಮೆಸೇಜ್ ರವಾನೆಯಾಗುತ್ತದೆ. ಹಾಗೆಯೇ ನಿರ್ಲಕ್ಷೃ ಮಾಡಿದರೆ ತೊಂದರೆ ಅನುಭವಿಸಬೇಕಾಗುತ್ತದೆ. ವಾಹನಗಳ ಸುಸ್ಥಿತಿ ಪ್ರಮಾಣ ಪತ್ರ (ಎಫ್‌ಸಿ) ಪಡೆಯಲು ಆರ್‌ಟಿಒ ಕಚೇರಿಗೆ ಹೋದರೆ, ದಂಡ ಪಾವತಿ ಮಾಡದ ಕಾರಣಕ್ಕೆ ಎಫ್‌ಸಿ ಸಿಗುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net