

ದಾವಣಗೆರೆ : ಭೂ ಸುರಕ್ಷಾ ಯೋಜನೆಯಡಿ ಜಿಲ್ಲೆಯ 1.20 ಕೋಟಿ ಪುಟಗಳಷ್ಟು ಕಂದಾಯ ಭೂ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾರ್ವಜನಿಕರಿಗೆ ಕಂದಾಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿಯೇ ನೀಡಲಾಗುತ್ತದೆ ಎಂದು ತಿಳಿಸಿದರು. ಹಳೇ ಪಹಣಿ, ಮುಟೇಷನ್, ಲ್ಯಾಂಡ್ ಗ್ರಾೃಂಟ್ ರಿಜಿಸ್ಟರ್, ಬಗರ್‌ಹುಕುಂ ಕಡತ ಸೇರಿದಂತೆ ಭೂಮಿಯ ಎಲ್ಲ ದಾಖಲೆಗಳನ್ನು ಪಡೆಯಲು ಅವಕಾಶ ನೀಡಲಾಗಿದೆ. ಎಲ್ಲ ತಾಲೂಕುಗಳಲ್ಲಿನ ಅಭಿಲೇಖಾಲಯದ ದಾಖಲೆಗಳ ಸ್ಕ್ಯಾನಿಂಗ್ ಕೆಲಸ ನಡೆಯುತ್ತಿದೆ ಎಂದರು. ಕಂದಾಯ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಲು ದಾವಣಗೆರೆ ತಾಲೂಕನ್ನು ಮಾದರಿಯಾಗಿ ತೆಗೆದುಕೊಳ್ಳಲಾಗಿತ್ತು. ಅಲ್ಲಿನ ಒಟ್ಟು 105466 ಕಡತಗಳಲ್ಲಿ 83802 ಕಡತಗಳ 52,80,765 ಪುಟಗಳ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲ್ ಮಾದರಿಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ಹರಿಹರ ತಾಲೂಕಿನಲ್ಲಿ 11,06,372, ಜಗಳೂರು 13,23.129, ಹೊನ್ನಾಳಿ 12,98,228, ಚನ್ನಗಿರಿ 11,48,183, ನ್ಯಾಮತಿ ತಾಲೂಕು ಕಚೇರಿಯಲ್ಲಿನ 11,51,723 ಪುಟಗಳ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ವರ್ಷಾಂತ್ಯಕ್ಕೆ ಬಾಕಿ ಇರುವ ಕಡತಗಳ ಸ್ಕ್ಯಾನಿಂಗ್ ಕೆಲಸ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಾನಾಯ್ಕ, ತಹಸೀಲ್ದಾರ್ ಡಾ. ಎಂ.ಬಿ. ಅಶ್ವಥ್ ಇದ್ದರು.