ಶಿಕ್ಷಕಿಗೆ 22.40 ಲಕ್ಷ ರೂ. ವಂಚನೆ

Crime_20250828235150706.jpg
Published on

ದಾವಣಗೆರೆ : ಡಿಜಿಟಲ್ ಅರೆಸ್ಟ್ ಪ್ರಕರಣದಲ್ಲಿ ನಗರದ ಶಿಕ್ಷಕಿಯೊಬ್ಬರಿಗೆ 22.40 ಲಕ್ಷ ರೂ.ಗಳನ್ನು ವಂಚಿಸಲಾಗಿದೆ. ಈ ಸಂಬಂಧ ಇಲ್ಲಿನ ಸಿಇಎನ್ ಅಪರಾಧ ಠಾಣೆಯ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.  ಕಳೆದ ಫೆಬ್ರವರಿಯಲ್ಲಿ ಶಿಕ್ಷಕಿ ಶಾಲೆಯಲ್ಲಿದ್ದಾಗ ವ್ಯಕ್ತಿಯೊಬ್ಬ ಕರೆ ಮಾಡಿ ‘ನಾನು ಬ್ಲೂ ಡಾಟ್ ಕೋರಿಯರ್ ಸರ್ವಿಸ್ ಮುಂಬೈಯಿ’ ಎಂದು ಪರಿಚಯಿಸಿಕೊಂಡಿದ್ದಾನೆ. ‘ನಿಮ್ಮ ಫೆಡಕ್ಸೃ್ ಕೋರಿಯರ್‌ನಲ್ಲಿ ಕೆಲವು ಔಷಧಗಳು ಮುಂಬೈನಿಂದ ದುಬೈಗೆ ಪಾರ್ಸಲ್ ಹೋಗುತ್ತಿದ್ದು ಅದರಲ್ಲಿ ಡ್ರಗ್ಸ್ ಕೂಡ ಇದೆ’ ಎಂದು ಹೆದರಿಸಿ, ನಿಮ್ಮ ಗುರುತನ್ನು ದುರುಪಯೋಗಪಡಿಸಿಕೊಂಡಿರುವುದಾಗಿ ಹೇಳಿ, ನಿಮ್ಮ ಮೇಲೆ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾನೆ.  ನಂತರ ಆಧಾರ್ ಕಾರ್ಡ್ ಮತ್ತು ಇ -ಮೇಲ್ ಐಡಿಯನ್ನು ಹಾಕಿಸಿಕೊಂಡು, ಡಿಸಿಪಿ ಮೇಡಂ ಮಾತನಾಡುತ್ತಿರುವುದಾಗಿ ಹೇಳಿ, ‘ನರೇಶ್ ಗೋಯಲ್ ಎಂಬ ವ್ಯಕ್ತಿ ಮನಿಲಾಂಡರಿಂಗ್ ಮಾಡುತ್ತಿದ್ದಾನೆ. ಆ ಕೇಸಿನಲ್ಲಿ ನೀವೂ ಇದ್ದೀರಿ. ಪ್ರತಿ ತಿಂಗಳು 20 ಲಕ್ಷ ನಿಮ್ಮ ಖಾತೆಗೆ ಬರುತ್ತಿದೆ. ಆ ಹಣ ಕಾನೂನುಬದ್ಧ ಆಗಿದೆಯೆ ಎಂದು ಪರಿಶೀಲಿಸಬೇಕಿದೆ ಎಂದು ತಿಳಿಸಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾನೆ.  ಆರೋಪಿಯ ಪತ್ತೆಗಾಗಿ ಸೈಬರ್ ಕ್ರೈಂ ಠಾಣೆಯ ಡಿವೈಎಸ್ಪಿ ಬಂಕಾಳಿ ನಾಗಪ್ಪ ನೇತೃತ್ವದ ತಂಡವು ಕಾರ್ಯಚರಣೆ ನಡೆಸಿ, ಆರೋಪಿ ಹಾಸನ ಜಿಲ್ಲೆ ಕೋರಟಿಕೆರೆ ಗ್ರಾಮದ ಅರುಣ್ ಕುಮಾರ್‌ನನ್ನು ಬಂಧಿಸಿದರು. ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿತರ ಬ್ಯಾಂಕ್ ಖಾತೆಯಲ್ಲಿದ್ದ 1.90 ಲಕ್ಷ ರೂ.ಗಳನ್ನು ಫ್ರೀಜ್ ಮಾಡಿಸಲಾಯಿತು. ಸಿಬ್ಬಂದಿ ಅಶೋಕ, ಮುತ್ತುರಾಜ್, ಯೋಗೀಶ್ ನಾಯ್ಕ್, ನಿಜಲಿಂಗಪ್ಪ ಕಾರ್ಯಾಚರಣೆ ನಡೆಸಿದ ತಂಡದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net