ಧರ್ಮೋದ್ಧಾರವೇ ಭಗವಂತನ ಅವತಾರದ ಉದ್ದೇಶ

IMG-20250520-WA0035.jpg
Published on

ದಾವಣಗೆರೆ : ಧರ್ಮಕ್ಕೆ ಸಂಕಷ್ಟ ಬಂದಾಗಲೆಲ್ಲ ಭಗವಂತ ಅವತರಿಸುತ್ತಾನೆ. ಧರ್ಮೋದ್ಧಾರವೇ ಅದರ ಉದ್ದೇಶ ಎಂದು ಶೃಂಗೇರಿ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ನುಡಿದರು.

ನಗರದ ಶಂಕರ ಸಮುದಾಯ ಭವನದಲ್ಲಿ ಶುಕ್ರವಾರ, ಶ್ರೀ ಶಂಕರ ಸೇವಾ ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಭಗವಂತ ಅನೇಕ ಅವತಾರಗಳನ್ನು ಎತ್ತಿದ್ದಾನೆ, ಪ್ರತಿಯೊಂದೂ ವಿಶಿಷ್ಟವಾಗಿವೆ. ಆಯಾ ಸಂದರ್ಭಕ್ಕೆ ತಕ್ಕಂತೆ ರೂಪ, ನಾಮ, ಸ್ವಭಾವಗಳು ವಿಭಿನ್ನವಾಗಿವೆ ಎಂದು ತಿಳಿಸಿದರು.

ರಾಮ, ಕೃಷ್ಣ, ನರಸಿಂಹ, ವಾಮನ, ಪರಶುರಾಮ ಹೀಗೆ ಒಂದೊಂದು ಅವತಾರವೂ ವಿಲಕ್ಷಣ ಸ್ವಭಾವದಿಂದ ಕೂಡಿವೆ. ಆಯಾ ಕಾಲಘಟ್ಟದಲ್ಲಿ ಯಾವ ಬಗೆಯ ಸಂಕಷ್ಟ ಬಂದಿದೆಯೋ ಅದಕ್ಕೆ ತಕ್ಕ ಉಪಾಯವಾಗಿ ಸೂಕ್ತ ಅವತಾರ ಎತ್ತಿದ್ದಾನೆ ಎಂದು ಹೇಳಿದರು.

ಜಗತ್ತಿಗೆ ಜ್ಞಾನವನ್ನು ನೀಡಲು ಶ್ರೀ ಶಂಕರ ಭಗವತ್ಪಾದರು ಜಗದ್ಗುರುಗಳ ರೂಪದಲ್ಲಿ ಅವತರಿಸಿದರು. ಹಿಂದು ಧರ್ಮದ ಉದ್ಧಾರ ಮಾಡಿದರು. ಧರ್ಮ ಮಾರ್ಗವನ್ನು ಉಪದೇಶಿಸಿದರು ಎಂದು ತಿಳಿಸಿದರು.

ಶಂಕರ ಭಗವತ್ಪಾದರು ಉಪದೇಶಿಸಿದ ಅದ್ವೈತ ತತ್ವವೇ ಅಂತಿಮವಾದುದು. ಅದರಿಂದ ಎಲ್ಲವೂ ತಿಳಿಯುತ್ತದೆ. ಆತ್ಮೋದ್ಧಾರದ ಮಾರ್ಗವನ್ನೂ ಅವರು ತಮ್ಮ ಉಪದೇಶಗಳಲ್ಲಿ ತೋರಿಸಿದ್ದಾರೆ ಎಂದರು.

ಧಾರ್ಮಿಕ ಆಚರಣೆಯನ್ನು ಶ್ರದ್ಧೆಯಿಂದ ಮಾಡುವ ಮೂಲಕ ಧರ್ಮದ ರಕ್ಷಣೆಯಲ್ಲಿ ನಾವೆಲ್ಲ ತೊಡಗಬೇಕಿದೆ. ಆಗ ಮಾತ್ರ ಧರ್ಮವು ನಮ್ಮನ್ನು ಕಾಪಾಡುತ್ತದೆ. ನಾವು ಮಾಡಿದ ಪುಣ್ಯ ಮತ್ತು ಧರ್ಮ ಕಾರ್ಯಗಳೇ ನಮ್ಮನ್ನು ರಕ್ಷಿಸುತ್ತವೆ ಎಂದು ನುಡಿದರು.

ಶ್ರೀ ಶಂಕರ ಸೇವಾ ಸಂಘದ ಅಧ್ಯಕ್ಷ ಡಾ. ಬಿ.ಟಿ. ಅಚ್ಯುತ, ಅನಿಲ್ ಬಾರೆಂಗಳ್ ಇನ್ನಿತರ ಪದಾಧಿಕಾರಿಗಳು, ಸಮಾಜದ ಮುಖಂಡರು ಇದ್ದರು.

ಆರಂಭದಲ್ಲಿ ವೇದಘೋಷ ಮಾಡಲಾಯಿತು. ನಳಿನಿ ಅಚ್ಯುತ ಮತ್ತು ಸಾವಿತ್ರಿ ಶಾಸ್ತ್ರಿ ಪ್ರಾರ್ಥಿಸಿದರು. ಶ್ರೀನಿವಾಸ ಜೋಷಿ ಸ್ವಾಗತಿಸಿದರು.

ಇದಕ್ಕೂ ಮೊದಲು ನಗರಕ್ಕೆ ಆಗಮಿಸಿದ ಜಗದ್ಗುರುಗಳನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು. ಶ್ರೀ ಚಂದ್ರಮೌಳೀಶ್ವರ ದೇವರ ಪೂಜೆ, ಶಾರದಾಂಬ ಭಜನಾ ಮಂಡಳಿಯಿಂದ ಸ್ತೋತ್ರ ಪಠಣ, ಮಹಾ ಮಂಗಳಾರತಿ, ಪ್ರಸಾದ ವಿನಿಯೋಗ ನೆರವೇರಿದವು.

ಶನಿವಾರ 10 ಗಂಟೆಗೆ ಭಕ್ತಾದಿಗಳಿಗೆ ಫಲ ಮಂತ್ರಾಕ್ಷತೆ ವಿತರಣೆ, 12 ಗಂಟೆಗೆ ಗುರುಗಳು ಗೋಕರ್ಣಕ್ಕೆ ಪ್ರಯಾಣ ಬೆಳೆಸುವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net