

ದಾವಣಗೆರೆ : ಅನ್ನದಾನ ಶ್ರೇಷ್ಠ ದಾನ. ಪ್ರತಿಯೊಬ್ಬರೂ ಯಥಾಶಕ್ತಿ ದಾನ ಮಾಡಬೇಕು, ಅದರಿಂದ ಉತ್ತಮ ಫಲ ದೊರಕುತ್ತದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ನಗರದ ಕೆ.ಬಿ. ಬಡಾವಣೆ ಅಜ್ಜಂಪುರ ಶೆಟ್ರು ಕಾಂಪೌಂಡ್‌ನಲ್ಲಿ ಬುಧವಾರ ಆಯೋಜಿಸಿದ್ದ, 25ನೇ ವರ್ಷದ ಅಕ್ಕಿ ಸಮರ್ಪಣೆ ಹಾಗೂ ಧರ್ಮಸಭೆಯಲ್ಲಿ ಮಾತನಾಡಿದರು. ದೊಡ್ಡ ದಾನವನ್ನೇ ಮಾಡಬೇಕು ಎಂದೇನಿಲ್ಲ. ಸಣ್ಣದಾದರೂ ಸರಿ, ಸಾಧ್ಯವಾದಷ್ಟು ದಾನ ಮಾಡಬೇಕು. ದೇವಸ್ಥಾನಗಳಿಗೆ ಕೊಡುಗೆ, ಕಾಣಿಕೆ ನೀಡಬೇಕು. ಇದರಿಂದ ಒಳ್ಳೆಯದಾಗುತ್ತದೆ ಎಂದು ತಿಳಿಸಿದರು. ಧರ್ಮಸ್ಥಳದಲ್ಲಿ ಮೊದಲಿನಿಂದಲೂ ಅನ್ನದಾನ ಮಾಡುವ ಪದ್ಧತಿಯಿದೆ. ಅದಕ್ಕೆ ವಿಶೇಷ ಮಹತ್ವವೂ ಇದೆ. ರಾಜ್ಯದ ವಿವಿಧೆಡೆಯಿಂದ, ತಮಿಳುನಾಡು ಮತ್ತಿತರ ರಾಜ್ಯಗಳಿಂದಲೂ ಭಕ್ತರು ಧಾನ್ಯ, ತರಕಾರಿ ಇನ್ನಿತರ ಪದಾರ್ಥಗಳನ್ನು ಕಳಿಸುತ್ತಾರೆ. ಇದರಿಂದ ಅನ್ನದಾನ ಕಾರ್ಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ತಿಳಿಸಿದರು. ಯಾವುದೇ ಹೋಮಗಳನ್ನು ಮಾಡುವಾಗ ಹವಿಸ್ಸನ್ನು ಅಗ್ನಿಯ ಮೂಲಕವೇ ಸಮರ್ಪಿಸುತ್ತೇವೆ, ಆಗ ಮಾತ್ರ ಆಯಾ ಶಕ್ತಿಗಳಿಗೆ ಅದು ತಲುಪುತ್ತದೆ. ಅದೇ ರೀತಿಯಾಗಿ ನಮ್ಮ ದೇಹದೊಳಗಿನ ಜಠರಾಗ್ನಿ (ಹಸಿವು) ಶಮನಗೊಳಿಸುವ ಶಕ್ತಿ ಅನ್ನದಾನಕ್ಕಿದೆ. ಅದರಿಂದ ತೃಪ್ತಿಯ ಭಾವ ಮೂಡುತ್ತದೆ ಎಂದು ಹೇಳಿದರು. ಧರ್ಮಸ್ಥಳದಲ್ಲಿ ಅನ್ನದಾನದ ಪದ್ಧತಿಯನ್ನು ಪಾಲಿಸಿಕೊಂಡು ಬಂದಿದ್ದೇವೆ. ಭಕ್ತರು ದಾಸೋಹ ಮಾಡುವ ಮೂಲಕ ತೃಪ್ತಿಯನ್ನು ಹೊಂದುತ್ತಾರೆ. ಪ್ರಸಾದ ಸ್ವೀಕರಿಸಿದವರೂ ಸಂತುಷ್ಟರಾಗುತ್ತಾರೆ. ಎಲ್ಲ ಕ್ಷೇತ್ರಗಳಲ್ಲೂ ಈ ಪದ್ಧತಿ ಮುಂದುವರಿಯಲಿ ಎಂದು ಆಶಿಸಿದರು. ನಾಗರಾಜ ಕಾಕನೂರು ಪ್ರಾಸ್ತಾವಿಕವಾಗಿ ಮಾತನಾಡಿ, ವೀರೇಂದ್ರ ಹೆಗ್ಗಡೆ ಅವರು ನಾಡಿನ ಜನರಿಗೆ ಬೆಳಕಾಗಿದ್ದಾರೆ. ಹಲವರು ದುಶ್ಚಟಗಳನ್ನು ತ್ಯಜಿಸಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಿದ್ದಾರೆ. ಮಹಿಳೆಯರು ಸ್ವಾವಲಂಬಿಗಳಾಗುವಂತೆ, ಸಬಲೀಕರಣಗೊಳ್ಳುವಂತೆ ಮಾಡಿದ್ದಾರೆ. ಸಹಸ್ರಾರು ಕುಟುಂಬಗಳು ಒಳ್ಳೆಯ ಬದುಕು ಕಟ್ಟಿಕೊಂಡಿವೆ ಎಂದು ತಿಳಿಸಿದರು. ದಾನಿ ಅಣಬೇರು ಮಂಜಣ್ಣ ಅವರು ಪ್ರತಿ ವರ್ಷ 350 ಕ್ವಿಂಟಾಲ್ ಅಕ್ಕಿಯನ್ನು ಧರ್ಮಸ್ಥಳಕ್ಕೆ ಕಳಿಸುತ್ತ ಬಂದಿದ್ದಾರೆ ಎಂದು ಹೇಳಿದರು. ಇದೇ ವೇಳೆ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ‘ಕಲ್ಪವೃಕ್ಷ’ ಪುಸ್ತಕವನ್ನು ಬಿಡುಗಡೆ ಮಾಡಿದರು. ದಾನಿ ಅಣಬೇರು ಮಂಜಣ್ಣ, ಲತಕ್ಕ, ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ, ಧರ್ಮಸ್ಥಳದ ಎಸ್‌ಕೆಡಿಆರ್‌ಡಿಪಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಎಸ್.ಎಸ್. ಅನಿಲ್ ಕುಮಾರ್ ಇದ್ದರು. ಎ.ವಿ. ಪ್ರಕೃತಿ ಪ್ರಾರ್ಥಿಸಿದರು. ಪ್ರತಿ ವರ್ಷದಂತೆ ಈ ಬಾರಿಯೂ ಧರ್ಮಸ್ಥಳಕ್ಕೆ ಅಕ್ಕಿಯನ್ನು ಸಮರ್ಪಣೆ ಮಾಡಲಾಯಿತು. ಧರ್ಮಸ್ಥಳದ ಭಕ್ತರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಿಬ್ಬಂದಿ, ಸದಸ್ಯರು, ಕಾರ್ಯಕರ್ತರು ಭಾಗವಹಿಸಿದ್ದರು.