

ದಾವಣಗೆರೆ : ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಪ್ರಚಾರ ಮಾಡಿ ಜನ ಸಮುದಾಯಕ್ಕೆ ತಿಳಿಸಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ ನಗರದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ‘ನಮ್ಮ ಸಂಕಲ್ಪ ವಿಕಸಿತ ಭಾರತ’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಯೋಜನೆಗಳ ಪ್ರಚಾರಕ್ಕಾಗಿ 2 ವಾಹನಗಳನ್ನು ನೀಡಲಾಗಿದೆ. ಜಿಲ್ಲೆಯಲ್ಲಿರುವ 1 ಸಾವಿರಕ್ಕೂ ಹೆಚ್ಚು ಹಳ್ಳಿಗಳಿಗೆ, 2 ಸಾವಿರಕ್ಕೂ ಹೆಚ್ಚು ಬೂತ್‌ಗಳಿಗೆ ಹೋಗಿ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ನರೇಂದ್ರ ಮೋದಿ ಅವರು 2014ರಲ್ಲಿ ಕೆಂಪು ಕೋಟೆಯ ಮೇಲೆ ನಿಂತು ಮಾಡಿದ ಎಲ್ಲ ಘೋಷಣೆಗಳನ್ನೂ ಜಾರಿಗೆ ತಂದಿದ್ದಾರೆ. ಇಲ್ಲಿಯ ವರೆಗೆ ವಿಮಾ ಯೋಜನೆಗಳು, ಜನಧನ್, ಪಿಂಚಣಿ, ಉಜ್ವಲಾ, ಕೃಷಿ ಸಿಂಚಾಯಿ, ಫಸಲ್‌ಬಿಮಾ, ಸ್ಮಾರ್ಟ್‌ಸಿಟಿ ಇನ್ನಿತರ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿಕೊಡಬೇಕಿದೆ ಎಂದರು.
ಸ್ಮಾರ್ಟ್‌ಸಿಟಿ ಯೋಜನೆ ಮುಕ್ತಾಯ ಹಂತದಲ್ಲಿದೆ. ಈ ಯೋಜನೆಯನ್ನು ಕೆಲವರು ತಾವೇ ತಂದಿದ್ದಾಗಿ ಹೇಳಿಕೊಳ್ಳುತ್ತಿದ್ದಾರೆ. ಜಲಸಿರಿ ಯೋಜನೆಯೂ ಪೂರ್ಣಗೊಳ್ಳುವ ಹಂತದಲ್ಲಿದೆ. ರಾಮ ಮಂದಿರ ನಿರ್ಮಾಣವಾಗಿದ್ದು ಶೀಘ್ರವೇ ಉದ್ಘಾಟನೆಯಾಗಲಿದೆ. ಈ ವಿಚಾರಗಳನ್ನು ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಮಾಡಬೇಕು ಎಂದು ತಿಳಿಸಿದರು.
ಮೋದಿ ವಿಶ್ವ ನಾಯಕರಾಗಿ ಬೆಳೆದಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಜನರಿಗೆ ಉಚಿತ ಲಸಿಕೆ ಒದಗಿಸಿ ಜೀವ ರಕ್ಷಣೆ ಮಾಡಿದರು. ಆಗ ಫಲಾನುಭವಿಗಳಿಗೆ ಉಚಿತವಾಗಿ 10 ಕೆಜಿ ಅಕ್ಕಿ ನೀಡಿದರು ಎಂದು ಮಾಹಿತಿ ನೀಡಿದರು.
ರಾಜ್ಯ ಸರ್ಕಾರದಲ್ಲಿ ತಾಳಮೇಳವಿಲ್ಲ. ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಿಗೆ ಒಂದು ಕಂತು ಮಾತ್ರ ಬಂದಿದೆ. ಅನ್ನಭಾಗ್ಯ ಯೋಜನೆಯ ಹಣವೂ ಸರಿಯಾಗಿ ತಲುಪಿಲ್ಲ. ಲೋಕಸಭಾ ಚುನಾವಣೆಯ ವರೆಗೂ ಗ್ಯಾರಂಟಿ ಯೋಜನೆಗಳನ್ನೂ ಇದೇ ರೀತಿ ಮುಂದುವರಿಸಿ ನಂತರ ನಿಲ್ಲಿಸಿಬಿಡುತ್ತಾರೆ ಎಂದು ಟೀಕಿಸಿದರು.
ಆದರೆ ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಡಬಲ್ ಇಂಜಿನ್ ಸರ್ಕಾರದಿಂದ ಅಭಿವೃದ್ಧಿ ಕಾರ್ಯಗಳು ಆಗಿದ್ದವು. ನಮ್ಮ ಕಾಲದ ಯೋಜನೆಗಳನ್ನೇ ಈಗಿನವರು ಉದ್ಘಾಟನೆ ಮಾಡುತ್ತಿದ್ದಾರೆ, ಅವರು ರೂಪಿಸಿದ ಯೋಜನೆಗಳು ಕಾರ್ಯಗತವಾಗಿಲ್ಲ ಎಂದು ಆರೋಪಿಸಿದರು.
ಲೀಡ್ ಬ್ಯಾಂಕಿನ ವಿಭಾಗೀಯ ಪ್ರಬಂಧಕ ಜಿ.ಸಿ. ಪ್ರಕಾಶ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಎಜಿಎಂ ಪ್ರವೀಣ ಪ್ರಭಾಕರ್, ಎಸ್‌ಬಿಐ ಎಜಿಎಂ ಅನಿಲ್ ಬಿಹಾರಿ, ಕೆನರಾ ಬ್ಯಾಂಕ್ ಮುಖ್ಯ ಪ್ರಬಂಧಕಿ ಶಿಲ್ಪಾ ಗಾಯಕವಾಡ್, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕಿ ರಶ್ಮಿ ರೇಖಾ, ಬ್ಯಾಂಕ್ ಆಫ್ ಬರೋಡಾದ ಅಧಿಕಾರಿ ಆನಂದಮೂರ್ತಿ, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಟಿ.ಎನ್. ದೇವರಾಜ್, ಎಂ.ಜಿ. ಬಸವನಗೌಡ, ರಾಘವೇಂದ್ರ ನಾಯರಿ ಇದ್ದರು.