

ದಾವಣಗೆರೆ : ಚನ್ನಗಿರಿ ತಾಲೂಕು ದೊಡ್ಡಘಟ್ಟ ಮತ್ತು ಬಸವಾಪಟ್ಟಣ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಸರಣಿ ಮನೆ ಕಳ್ಳತನ ಪ್ರಕರಣ ಸಂಬಂಧ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನೊಬ್ಬನನ್ನು ವಶಕ್ಕೆ ಪಡೆದಿರುವ ಪೊಲೀಸರು ಇನ್ನೊಬ್ಬ ಆರೋಪಿಯನ್ನು ಬಂಧಿಸಿ 5.5 ಲಕ್ಷ ರೂ. ಮೌಲ್ಯದ ಸ್ವತ್ತು ವಶಪಡಿಸಿಕೊಂಡಿದ್ದಾರೆ. ಮನೋಜ ಬಂಧಿತ ಆರೋಪಿ. ಸಂತೇಬೆನ್ನೂರು ವೃತ್ತ ವ್ಯಾಪ್ತಿಯ ಬಸವಾಪಟ್ಟಣ ಠಾಣಾ ಸರಹದ್ದಿನ ದೊಡ್ಡಘಟ್ಟ ಮತ್ತು ಬಸವಾಪಟ್ಟಣ ಗ್ರಾಮದಲ್ಲಿ ಸರಣಿ ಮನೆಕಳ್ಳತನ ನಡೆದಿದ್ದು ಈ ಬಗ್ಗೆ ಫೆ. 8 ಹಾಗೂ 10 ರಂದು ಒಟ್ಟು 3 ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಗಳ ಆರೋಪಿತರ ಪತ್ತೆ ಕಾರ್ಯ ಪೊಲೀಸರಿಗೆ ಸವಾಲಾಗಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಎಸ್ಪಿಗಳಾದ ವಿಜಯಕುಮಾರ ಎಂ. ಸಂತೋಷ ಹಾಗೂ ಮಂಜುನಾಥ, ಚನ್ನಗಿರಿಯ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್ ಮಾರ್ಗದರ್ಶನದಲ್ಲಿ ಸಂತೇಬೆನ್ನೂರು ವೃತ್ತದ ಸಿಪಿಐ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ಬಸವಾಪಟ್ಟಣ ಮತ್ತು ಸಂತೇಬೆನ್ನೂರು ಪಿಎಸ್‌ಐ, ಸಿಬ್ಬಂದಿಯನ್ನು ಒಳಗೊಂಡ 2 ತಂಡಗಳನ್ನು ರಚಿಸಲಾಗಿತ್ತು. ತಂಡವು ಆರೋಪಿಗಳನ್ನು ಶುಕ್ರವಾರ ಪತ್ತೆ ಮಾಡಿದ್ದು 500 ಗ್ರಾಂ. ಬೆಳ್ಳಿಯ ಆಭರಣ, 45 ಗ್ರಾಂ ಬಂಗಾರದ ಆಭರಣ ಮತ್ತು ಕೃತ್ಯಕ್ಕೆ ಬಳಸಿದ 2 ಮೋಟಾರು ಬೈಕ್ ವಶಪಡಿಸಿಕೊಳ್ಳಲಾಗಿದೆ. ಅವುಗಳ ಪೈಕಿ 1 ಬೈಕ್ ಬಸವಾಪಟ್ಟಣ ಪೊಲೀಸ್ ಠಾಣೆ ಪ್ರಕರಣಕ್ಕೆ ಸಂಬಂಧಿಸಿದ್ದು. ಇನ್ನೊಂದು ಬೈಕ್‌ನ್ನು ಕಡೂರು ನಗರದಲ್ಲಿ ಕಳ್ಳತನ ಮಾಡಿದ್ದಾಗಿ ಆರೋಪಿಗಳು ತಿಳಿಸಿದ್ದಾರೆ. ಇನ್ನಿಬ್ಬರು ಆರೋಪಿಗಳ ಪತ್ತೆ ಕಾರ್ಯ ಮುಂದುವರಿದಿದೆ. ... *ಆರೋಪಿತರ ಹಿನ್ನೆಲೆ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನು ಜನವರಿ ತಿಂಗಳಲ್ಲಿ ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ 5 ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಮನೋಜ್ ಬಿಳಿಚೋಡು ಪೊಲೀಸ್ ಠಾಣೆ ವ್ಯಾಪ್ತಿಯ ಸುಲಿಗೆ ಪ್ರಕರಣದಲ್ಲಿ ಪಾಲ್ಗೊಂಡಿದ್ದ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ಬಸವಾಪಟ್ಟಣ ಪಿಎಸ್.ಐ ಭಾರತಿ, ವೀಣಾ, ಸಂತೇಬೆನ್ನೂರು ಪಿಎಸ್‌ಐ ಜಗದೀಶ್, ಎಎಸ್‌ಐ ದೊಡ್ಡಬಸಪ್ಪ, ಸಿಬ್ಬಂದಿ ಸತೀಶ, ರುದ್ರೇಶ ಎಂ, ವೀರಭದ್ರಪ್ಪ, ಹನುಮಂತಪ್ಪ, ರಾಘವೇಂದ್ರ, ಪರಶುರಾಮ, ಅರುಣ, ಮೋಹನ, ತಿಮ್ಮರಾಜು, ಇಬ್ರಾಹಿಂ, ಅಣ್ಣೇಶ, ವೆಂಕಟೇಶ, ರವಿ ಕುಮಾರ, ಜಿಲ್ಲಾ ಪೊಲೀಸ್ ಕಚೇರಿಯ ಸಿಬ್ಬಂದಿ ಶಿವಕುಮಾರ ಬಿ ಕೆ, ರಮೇಶ್ ಎಂ.ಪಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿದ್ದರು.