

ದಾವಣಗೆರೆ : ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಮತ್ತು ಬಾಪೂಜಿ ಡೆಂಟಲ್ ಕಾಲೇಜು ಸಂಯುಕ್ತ ಆಶ್ರಯದಲ್ಲಿ ರಾಜ್ಯಮಟ್ಟದ 4ನೇ ದಂತ ಕುಳಿ ಮತ್ತು ಬೇರು ಚಿಕಿತ್ಸೆ ಸಮ್ಮೇಳನವನ್ನು ಜು. 31 ರಿಂದ ಆ. 2ರ ವರೆಗೆ ನಗರದ ದಂತ ವಿಜ್ಞಾನ ಕಾಲೇಜು ಮತ್ತು ಬಾಪೂಜಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಡಾ. ಧನ್ಯಕುಮಾರ್ ಹೇಳಿದರು. ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಸಮ್ಮೇಳನಕ್ಕೆ ರಾಜ್ಯದ ವಿವಿಧೆಡೆಯಿಂದ ಹಾಗೂ ಆಂಧ್ರಪ್ರದೇಶ ಮತ್ತು ತೆಲಂಗಾಣದಿಂದ 270 ಕ್ಕೂ ಹೆಚ್ಚು ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ ಎಂದು ತಿಳಿಸಿದರು. ಸಮ್ಮೇಳನದಲ್ಲಿ ವಿದ್ಯಾರ್ಥಿಗಳು ಮತ್ತು ತಜ್ಞರು ಪ್ರಬಂಧ ಮಂಡನೆ ಹಾಗೂ ಪೋಸ್ಟರ್‌ಗಳ ಪ್ರದರ್ಶನ ಮಾಡಲಿದ್ದಾರೆ. ದಂತ ವೈದ್ಯಕೀಯಕ್ಕೆ ಸಂಬಂಧಿಸಿದ 8 ಮಳಿಗೆಗಳನ್ನು ಹಾಕಲಾಗುವುದು ಎಂದು ಮಾಹಿತಿ ನೀಡಿದರು. ಜು. 31 ರಂದು ಸಮ್ಮೇಳನಪೂರ್ವ ಕಾರ್ಯಕ್ರಮ ಇರಲಿದೆ. ಜೆಜೆಎಂ ಕಾಲೇಜಿನ ಪ್ರಾಧ್ಯಾಪಕಿ ಡಾ. ಉಷಾ ಎಂ.ಜಿ, ಎಸಿಇ ಕರ್ನಾಟಕ ಸಂಘಟನೆಯ ಅಧ್ಯಕ್ಷೆ ಡಾ. ರಮ್ಯಾ ರಘು ಇತರರು ಭಾಗವಹಿಸುವರು ಎಂದರು. ಆ. 1ರಂದು ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಭಾಗವಹಿಸುವರು ಎಂದು ತಿಳಿಸಿದರು. ‘ಕನ್ಸರ್ವ್ ವಿತ್ ಇಂಟೆಲಿಜೆನ್ಸ್: ರೂಟೆಡ್ ಇನ್ ಸ್ಕಿಲ್ ಟೆಕ್’ ಎಂಬುದು ಸಮ್ಮೇಳನದ ಧ್ಯೇಯ ವಾಕ್ಯವಾಗಿದೆ ಎಂದು ಹೇಳಿದರು. ಸಮ್ಮೇಳನದ ಸಂಘಟನಾ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಗೌಡ, ವೈಜ್ಞಾನಿಕ ಸಮಿತಿಯ ಅಧ್ಯಕ್ಷ ಡಾ. ಬಸವಣ್ಣ, ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ನಿರ್ದೇಶಕಿ ಡಾ. ವಸುಂಧರ ಶಿವಣ್ಣ ಸುದ್ದಿಗೋಷ್ಠಿಯಲ್ಲಿದ್ದರು.