

ದಾವಣಗೆರೆ : ರಾಷ್ಟ್ರೀಯ ಆರೋಗ್ಯ ಮಿಷನ್ ಮಾದರಿಯಲ್ಲಿ ರಾಷ್ಟ್ರೀಯ ಬಾಯಿ ಆರೋಗ್ಯ (ಓರಲ್ ಹೆಲ್ತ್) ಮಿಷನ್ ಸ್ಥಾಪಿಸುವ ಅಗತ್ಯವಿದೆ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು. ಬಾಪೂಜಿ ದಂತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಸಹಯೋಗದಲ್ಲಿ ನಗರದ ಬಾಪೂಜಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ, ಭಾರತೀಯ ಪ್ರಾಸ್ತೋಡಾಂಟಿಕ್ಸೃ್ ಸೊಸೈಟಿಯ ರಾಜ್ಯಮಟ್ಟದ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಆರೋಗ್ಯ ಇಲಾಖೆಯಲ್ಲಿ ಆಯುಷ್ ವಿಭಾಗಕ್ಕೂ ಪ್ರತ್ಯೇಕ ಮಿಷನ್ ಇದೆ, ಆದರೆ ದಂತ ವೈದ್ಯಕೀಯಕ್ಕೆ ಆ ವ್ಯವಸ್ಥೆ ಇಲ್ಲ. ನಾವೆಲ್ಲ ಸೇರಿ ಅಂಥದೊಂದು ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಡೋಣ ಎಂದರು. ಬಾಯಿ ಆರೋಗ್ಯ ಕ್ಷೇತ್ರದಲ್ಲಿ ಸಂಶೋಧನೆಗೆ ಹೆಚ್ಚಿನ ಒತ್ತು ಕೊಡಬೇಕಿದೆ. ದೇಶದಲ್ಲಿ ಪ್ರತಿ ವರ್ಷ ಸಾವಿರಾರು ದಂತ ವೈದ್ಯ ಪದವೀಧರರು ಹೊರ ಬರುತ್ತಾರೆ, ಆದರೆ ಜಾಗತಿಕ ಮಟ್ಟದ ಸಂಶೋಧನೆಯಲ್ಲಿ ನಮ್ಮ ಕೊಡುಗೆ ಕೇವಲ ಶೇ. 1 ರಿಂದ 2 ರಷ್ಟಿದೆ ಎಂದು ತಿಳಿಸಿದರು. ದೇಶದಲ್ಲಿ ಶೇ. 80 ರಷ್ಟು ಮಕ್ಕಳು, ಶೇ. 85 ರಷ್ಟು ಹದಿಹರೆಯದವರು ದಂತ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಾರೆ. ಆದರೆ ಎಲ್ಲರಿಗೂ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿಲ್ಲ. ವ್ಯಕ್ತಿಯ ಘನತೆ, ಆತ್ಮವಿಶ್ವಾಸಕ್ಕೆ ದಂತ ಆರೋಗ್ಯ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು. ದಂತ ಆರೋಗ್ಯ, ಹಲ್ಲುಗಳನ್ನು ಬ್ರಶ್ ಮಾಡುವ ವಿಧಾನ, ಬಾಯಿ ಕ್ಯಾನ್ಸರ್‌ನ ಕಾರಣಗಳ ಕುರಿತು ಸಮಾಜದಲ್ಲಿ, ವಿಶೇಷವಾಗಿ ಯುವಜನರಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ಶಾಲಾ ಕಾಲೇಜುಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡಿ ಗ್ರಾಮೀಣ ಪ್ರದೇಶಗಳ ಜನರಲ್ಲಿ ಜಾಗೃತಿ ಮಾಡಬೇಕು. ದಂತ ಚಿಕಿತ್ಸೆಯ ವ್ಯವಸ್ಥೆಯಿರುವ ವ್ಯಾನ್‌ಗಳ ಮೂಲಕ ಹಳ್ಳಿಯ ಜನರನ್ನು ತಲುಪಬೇಕು ಎಂದು ಸಲಹೆ ನೀಡಿದರು. ಎಸ್‌ಎಸ್ ಕೇರ್ ಟ್ರಸ್ಟ್ ವತಿಯಿಂದಲೂ ಬಾಯಿ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ತಿಳಿವಳಿಕೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಪ್ರಾಸ್ತೋಡಾಂಟಿಕ್ಸೃ್ ಸೊಸೈಟಿಯ ರಾಜ್ಯ ಕಾರ್ಯದರ್ಶಿ ಡಾ. ಉಮೇಶ್ ಪೈ ಮಾತನಾಡಿ, ಕಳೆದ ಒಂದು ವರ್ಷದಲ್ಲಿ ಸಮಾಜದಲ್ಲಿ ಮಾಡಿರುವ ಜಾಗೃತಿ, ಆರೋಗ್ಯ ಶಿಬಿರಗಳು, ಗ್ರಾಮೀಣ ಪ್ರದೇಶಗಳಲ್ಲಿ ಕೈಗೊಂಡ ಚಟುವಟಿಕೆಗಳ ಮಾಹಿತಿ ನೀಡಿದರು. ರಾಷ್ಟ್ರೀಯ ಪ್ರಾಸ್ತೋಡಾಂಟಿಕ್ಸೃ್ ಸೊಸೈಟಿಯ ಅಧ್ಯಕ್ಷೆ ಡಾ. ಶಿಲ್ಪ ಶೆಟ್ಟಿ, ರಾಷ್ಟ್ರೀಯ ಕಾರ್ಯದರ್ಶಿ ಡಾ. ಜಂಗಾಲ ಹರಿ, ಬಾಪೂಜಿ ದಂತ ಕಾಲೇಜುಗಳ ಪ್ರಾಚಾರ್ಯರಾದ ಡಾ. ಡಿ.ಬಿ. ನಂದೀಶ್ವರ್, ಡಾ. ಐ.ಎಂ. ಅಲಿ, ಡಾ.ಕೆ.ಟಿ. ರೂಪಾ, ಡಾ.ಎಚ್.ಎಸ್. ಶಶಿಧರ, ಡಾ. ಮನೋಜ್ ಶೆಟ್ಟಿ, ಡಾ. ಕೊನಾರ್ಕ್ ಪಾಟೀಲ್, ಡಾ. ಪಿ. ಶೇಷಾ ರೆಡ್ಡಿ ಇದ್ದರು. ಡಾ. ರಕ್ಷಾ ಪ್ರಾರ್ಥಿಸಿದರು.