ಡೆಂಘೆ ನಿಯಂತ್ರಣಕ್ಕೆ ಆಯುಷ್ ಅಸ್ತ್ರ

dvg-larva-survey-16.jpg
Published on

ರಮೇಶ ಜಹಗೀರದಾರ್ ದಾವಣಗೆರೆ  ಡೆಂಘೆ ನಿಯಂತ್ರಣ ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆಯ ಜತೆ ಜತೆಗೇ ಆಯುಷ್ ಇಲಾಖೆಯಿಂದಲೂ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳಿಂದ ಹಲವು ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ.  ಜಿಲ್ಲೆಯಲ್ಲಿ 25 ಆಯುಷ್ಮಾನ್ ಆರೋಗ್ಯ ಮಂದಿರಗಳು (ಆಯುಷ್), ಒಂದು ಜಿಲ್ಲಾ ಆಯುಷ್ ಆಸ್ಪತ್ರೆ, ಹರಿಹರ ಮತ್ತು ಚನ್ನಗಿರಿಯಲ್ಲಿ ತಾಲೂಕು ಆಸ್ಪತ್ರೆಗಳಿವೆ. ದಾವಣಗೆರೆಯಲ್ಲಿ ಒಂದು ಪ್ರಕೃತಿ ಚಿಕಿತ್ಸಾ ಕೇಂದ್ರವಿದೆ. 24 ಆಯುಷ್ ವೈದ್ಯಾಧಿಕಾರಿಗಳು, 37 ಜನ ಯೋಗ ತರಬೇತುದಾರರು ಹಾಗೂ 25 ಮಂದಿ ಗ್ರೂಪ್ ಡಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.  ಡೆಂೆ ಜ್ವರ ಆತಂಕದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯುರ್ವೇದ ಆಸ್ಪತ್ರೆಗಳ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತಿದೆ. ಸೊಳ್ಳೆಗಳಿಂದ ಹರಡುವ ಈ ಕಾಯಿಲೆಯ ಲಕ್ಷಣ ಹಾಗೂ ಅದು ಬರದಂತೆ ತಡೆಯಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕುರಿತು ಜಾಗೃತಿ ಉಂಟು ಮಾಡಲಾಗುತ್ತಿದೆ.  ಲಾರ್ವಾ ಸರ್ವೇ ಕೈಗೊಂಡು ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುವ ತಾಣಗಳನ್ನು ನಾಶಪಡಿಸುವ ಕೆಲಸದಲ್ಲಿ ಸಿಬ್ಬಂದಿ ತೊಡಗಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ನೀರು ನಿಲ್ಲುವ ಜಾಗಗಳನ್ನು ಗುರುತಿಸಿ, ಅಂಥ ಕಡೆಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವ ಸಾಧ್ಯತೆ ಇರುವ ಬಗ್ಗೆ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲಾಗುತ್ತಿದೆ. ನೀರು ಸಂಗ್ರಹಿಸುವ ತೊಟ್ಟಿಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡಲಾಗುತ್ತಿದೆ.  ಬೇವಿನ ಸೊಪ್ಪಿನ ಹೊಗೆ ಹಾಕುವ ಮೂಲಕ ಸೊಳ್ಳೆಗಳನ್ನು ಓಡಿಸಲಾಗುತ್ತಿದೆ. ಕರಿದ ಪದಾರ್ಥಗಳು, ಫಾಸ್ಟ್ ಫುಡ್‌ಗಳಿಂದ ದೂರವಿದ್ದು ಪೌಷ್ಟಿಕ ಆಹಾರ ಸೇವಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ.  ...  

(ಬಾಕ್ಸ್)  
ರೋಗ ನಿರೋಧಕ ಶಕ್ತಿ  
ಡೆಂಘೆ ಚಿಕಿತ್ಸೆ ಹಾಗೂ ರೋಗ ನಿರೋಧಕ ಶಕ್ತಿ ಬೆಳೆಸಲು ಆಯುರ್ವೇದದ ಹಲವು ಔಷಧಗಳನ್ನು ಆಯುಷ್ ಇಲಾಖೆಯಿಂದ ನೀಡಲಾಗುತ್ತಿದೆ.  ಅಶ್ವಗಂಧಾರಿಷ್ಟ, ಆಮಲಕಿ ಚೂರ್ಣ, ಶುಂಠಿ ಚೂರ್ಣ, ಚ್ಯವನಪ್ರಾಶ, ಆಯುಷ್-64 ಮಾತ್ರೆಗಳು, ಅಮೃತಾರಿಷ್ಟ, ಸಂಶಮನವಟಿ, ದಶಮೂಲಾರಿಷ್ಟ, ಶೀತೋಪಲಾದಿ ಚೂರ್ಣ, ತಾಳಿಸಾದಿ ಚೂರ್ಣ ಸೇರಿ ಹಲವು ಔಷಧಗಳನ್ನು ರೋಗಲಕ್ಷಣ ಆಧರಿಸಿ ನೀಡಲಾಗುತ್ತಿದೆ.  ಡೆಂಘೆ ಜ್ವರ ಬಂದರೆ ಸಾಮಾನ್ಯವಾಗಿ ಪ್ಲೇಟ್‌ಲೆಟ್ ಕಡಿಮೆಯಾಗುತ್ತವೆ. ಪಪ್ಪಾಯಿ ಎಲೆಯ ರಸ ಇದಕ್ಕೆ ದಿವ್ಯೌಷಧಿ ಎನ್ನುತ್ತವೆ ಆಯುಷ್ ಇಲಾಖೆಯ ಮೂಲಗಳು. ಈ ಬಗ್ಗೆಯೂ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಮುಖ್ಯವಾಗಿ ರೋಗ ನಿರೋಧಕ ಶಕ್ತಿ ಬೆಳೆಸುವುದಕ್ಕೆ ಇಲಾಖೆ ಆದ್ಯತೆ ನೀಡಿದೆ.  ...  

(ಕೋಟ್)  

ಮಳೆ ಹೆಚ್ಚಾಗುತ್ತಿರುವುದರಿಂದ ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗಿ ಅದರಿಂದ ಡೆಂಘೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಸಾರ್ವಜನಿಕರು ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಮುಖ, ಕೈ, ಕಾಲಿಗೆ ಕೊಬ್ಬರಿ ಎಣ್ಣೆ ಹಚ್ಚುವುದರಿಂದ ಸೊಳ್ಳೆಗಳನ್ನು ದೂರ ಇಡಬಹುದು. ಡೆಂಘೆ ನಿಯಂತ್ರಿಸುವ ನಿಟ್ಟಿನಲ್ಲಿ ಇಲಾಖೆಯಿಂದ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.  
ಡಾ. ಬಿ.ಯು. ಯೋಗೇಂದ್ರ ಕುಮಾರ್, ಜಿಲ್ಲಾ ಆಯುಷ್ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net