

ದಾವಣಗೆರೆ : ಮನೆ ಮನೆಯಲ್ಲೂ ದೀಪಗಳ ಸಾಲು, ಎಲ್ಲೆಲ್ಲೂ ಪಟಾಕಿಗಳ ಸದ್ದು, ಕಣ್ಣು ಕೋರೈಸುವ ಆಕರ್ಷಕ ಆಕಾಶ ಬುಟ್ಟಿಗಳು. ಅಂಗಡಿಗಳಲ್ಲಿ ಹೂವಿನ ಅಲಂಕಾರ, ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಭರಾಟೆ. ಜಿಲ್ಲೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ ಕಳೆಗಟ್ಟಿದ ಪರಿಯಿದು. ಮನೆ ಬಾಗಿಲಲ್ಲಿ ಮಾವಿನ ತೋರಣ ಸ್ವಾಗತಿಸಿದರೆ ನೆಂಟರಿಷ್ಟರ ಸಮಾಗಮ ಹಬ್ಬದ ಸಡಗರ, ಗಡಿಬಿಡಿಯನ್ನು ಹೆಚ್ಚಿಸಿದೆ. ಅಡುಗೆ ಮನೆಯಲ್ಲಿ ಸಿಹಿಯೂಟದ ಘಮ. ಸಂಚಾರಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಬೀರಲಿಂಗೇಶ್ವರ ದೇವಸ್ಥಾನದ ಮೈದಾನದಲ್ಲಿ ಹಬ್ಬದ ಪರಿಕರಗಳನ್ನು ಮಾರಾಟ ಮಾಡಬೇಕು ಎಂದು ಈ ಮೊದಲು ನಿಗದಿಯಾಗಿತ್ತು. ಆದರೆ ಭಾನುವಾರ ಸುರಿದ ಮಳೆಯಿಂದ ಆ ಜಾಗದಲ್ಲಿ ನೀರು ನಿಂತು, ಕೆಸರು ಆಗಿದ್ದರಿಂದ ಪ್ರವಾಸಿ ಮಂದಿರ ರಸ್ತೆ, ಶಾಮನೂರು ರಸ್ತೆ, ಗಡಿಯಾರ ಕಂಬ, ಕೆ.ಆರ್. ಮಾರುಕಟ್ಟೆ ಇನ್ನಿತರ ಕಡೆಗಳಲ್ಲಿ ವ್ಯಾಪಾರಸ್ಥರು ಠಿಕಾಣಿ ಹೂಡಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ಹೂವು, ಬಾಳೆ ಕಂದು, ಬೂದುಗುಂಬಳ ಕಾಯಿಗಳ ರಾಶಿ ಕಣ್ಣಿಗೆ ಬೀಳುತ್ತದೆ. ಬಣ್ಣ ಬಣ್ಣದ ಹೂವುಗಳು, ತರಹೇವಾರಿ ಹಣ್ಣುಗಳು, ಮಾವಿನ ಸೊಪ್ಪು, ತಂಗಡಕಿ ಹೂವು, ಉತ್ತರಾಣಿ ಕಡ್ಡಿ, ಗರಿಕೆ, ಮಹಾಲಿಂಗನ ಬಳ್ಳಿ, ವೀಳ್ಯದೆಲೆ, ಹೊಂಬಾಳೆ, ಕಮಲದ ಹೂವು, ತುಳಸಿ, ತೆಂಗಿನ ಕಾಯಿಗಳು ಸ್ವಾಗತಿಸುತ್ತವೆ. ಅರಿಷಿಣ-ಕುಂಕುಮ, ಬಳೆ, ಹಣತೆಗಳು, ರಂಗೋಲಿ ಇತ್ಯಾದಿ ಪೂಜಾ ಸಾಮಗ್ರಿಗಳು ಕೈಬೀಸಿ ಕರೆಯುತ್ತವೆ. ಕುಟುಂಬದ ಸದಸ್ಯರೊಡಗೂಡಿ ಮಾರುಕಟ್ಟೆಗೆ ಬಂದವರು ಚೌಕಾಸಿಯಲ್ಲಿ ತೊಡಗಿದ್ದರು. ಉತ್ತಮ ಗುಣಮಟ್ಟ, ಕಡಿಮೆ ಬೆಲೆಗೆ ಎಲ್ಲಿ ಸಿಗಬಹುದು ಎಂಬ ಹುಡುಕಾಟ ನಡೆಸಿದ್ದರು. ಕೆಲವರು ಕಾರಿನಲ್ಲಿ, ಮತ್ತೆ ಕೆಲವರು ದ್ವಿಚಕ್ರ ವಾಹನಗಳಲ್ಲಿ ಬಂದಿದ್ದರು. ಚೀಲಗಳಿಗೆ ತುಂಬಿಸಿಕೊಂಡು, ಸಾಧ್ಯವಾದಷ್ಟು ಕೈಯಲ್ಲಿ ಹಿಡಿದು ಮನೆಯತ್ತ ಸಾಗಿದರು. ಹಳ್ಳಿಗಳಿಂದ ಬಂದಿದ್ದ ವ್ಯಾಪಾರಸ್ಥರು ದೀಪಾವಳಿಯ ಈ ಸೀಸನ್‌ನಲ್ಲಿ ಒಂದಿಷ್ಟು ಆದಾಯ ಮಾಡಿಕೊಳ್ಳುವ ತವಕದಲ್ಲಿದ್ದರು. ಮೊದಲ ದಿನ ವ್ಯಾಪಾರ ಕಡಿಮೆ ಇರಬಹುದು, ಇನ್ನೂ ಎರಡು ದಿನಗಳಲ್ಲಿ ಚುರುಕಾಗುವ ನಿರೀಕ್ಷೆಯಲ್ಲಿದ್ದರು.