ಮಕ್ಕಳೇ ಪಟಾಕಿಗಳಿಂದ ದೂರವಿರಿ

dvg-suraksha-deepavali.jpg
Published on

ದಾವಣಗೆರೆ  : ಮಕ್ಕಳು ಪಟಾಕಿಗಳನ್ನು ಬಳಸದೇ ಇರುವುದು ಉತ್ತಮ. ಈ ಬಗ್ಗೆ ಪಾಲಕರು ಜಾಗೃತಿ ಮೂಡಿಸಬೇಕು ಎಂದು ಪರಿಸರ ಅಧಿಕಾರಿ ರಾಜಶೇಖರ್ ಪುರಾಣಿಕ್ ಸಲಹೆ ನೀಡಿದರು.  ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಸಂರಕ್ಷಣಾ ವೇದಿಕೆ, ದಾವಣಗೆರೆ ಸೈನ್ಸ್ ಫೌಂಡೇಶನ್ ಹಾಗೂ ಅಮೃತ್ ಯುವಕರ ಸಂಘದ ಸಂಯುಕ್ತ ಆಶ್ರಯದಲ್ಲಿ ನಗರದ ಸೇಂಟ್ ಜಾನ್ಸ್ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಸುರಕ್ಷಾ ದೀಪಾವಳಿ ಕಾರ್ಯಕ್ರಮದಲ್ಲಿ ಮಾತನಾಡಿದರು.  ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ಪಟಾಕಿಯಿಂದ ಹಲವಾರು ರೀತಿಯ ದುಷ್ಪರಿಣಾಮಗಳು ಉಂಟಾಗುತ್ತಿದ್ದು, ವಾಯು ಗುಣಮಟ್ಟವು ಕುಸಿಯುತ್ತಿದೆ. ಪಟಾಕಿ ಸಿಡಿಸುವುದರಿಂದ ಮಕ್ಕಳಿಗೆ ಕಣ್ಣು, ಕಿವಿ ಹಾಗೂ ದೇಹಕ್ಕೆ ಬೆಂಕಿ ಸ್ಪರ್ಶವಾಗಿ ಅನಾಹುತಗಳಾಗುತ್ತಿವೆ. ಇದನ್ನರಿತು ಸರ್ಕಾರ ಹಸಿರು ಪಟಾಕಿಗಳ ಮಾರಾಟಕ್ಕೆ ಮಾತ್ರ ಅವಕಾಶ ನೀಡಿದೆ ಎಂದು ತಿಳಿಸಿದರು.  ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ವೈಜ್ಞಾನಿಕ ಅಧಿಕಾರಿ ಡಾ. ಎಲ್. ಮಂಜುನಾಥ ಮಾತನಾಡಿ, ಪಟಾಕಿಗಳಿಂದ ಪ್ರಾಣಿ, ಪಕ್ಷಿ ಹಾಗೂ ಮನುಷ್ಯರಿಗೆ ಹಾನಿಯಾಗುತ್ತದೆ. ಇದನ್ನು ನಿಯಂತ್ರಿಸಲು ಸರ್ಕಾರ ಹಾಗೂ ಇಲಾಖೆ ಪ್ರಯತ್ನಿಸುತ್ತಿದೆ. ಪಟಾಕಿಯ ಹೊಗೆಯಿಂದ ಶ್ವಾಸಕೋಶದ ತೊಂದರೆಗಳಾಗುತ್ತವೆ. ಮಕ್ಕಳು ಪಟಾಕಿಗಳಿಂದ ದೂರವಿದ್ದು, ದೀಪಗಳಿಂದ ದೀಪಾವಳಿಯನ್ನು ಆಚರಿಸಬೇಕಾಗಿ ತಿಳಿಸಿದರು.  ಸೇಂಟ್ ಜಾನ್ಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಟಿ.ಎಂ. ಉಮಾಪತಯ್ಯ ಅಧ್ಯಕ್ಷತೆ ವಹಿಸಿದ್ದರು. ದಾವಣಗೆರೆ ಸೈನ್ಸ್ ಫೌಂಡೇಷನ್‌ನ  ಎಂ.ಗುರುಸಿದ್ಧಸ್ವಾಮಿ ಸುರಕ್ಷಾ ದೀಪಾವಳಿಯ ಪ್ರಮಾಣವಚನ ಬೋಧಿಸಿದರು. ಅಮೃತ ಯುವಕ ಸಂಘದ ಅಧ್ಯಕ್ಷ ಆರ್.ಬಿ. ಹನುಮಂತಪ್ಪ ಸ್ವಾಗತಿಸಿದರು. ಶಿಲ್ಪ ನಿರೂಪಿಸಿದರು. ಶಾಲೆಯ ಪ್ರಾಚಾರ್ಯ ಆರ್. ಸೈಯದ್ ಆರೀಫ್, ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕ ಮಾಲತೇಶ್, ಶಾಲೆಯ ಶಿಕ್ಷಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net