

ದಾವಣಗೆರೆ: ಕೋವಿಡ್‌ನಿಂದ ಸಂಭವಿಸುವ ಮರಣ ಪ್ರಮಾಣ ರಾಜ್ಯದ ಸರಾಸರಿಗಿಂತ ಜಿಲ್ಲೆಯಲ್ಲಿ ಹೆಚ್ಚಿದೆ. ಸಾವಿಗೀಡಾಗುವವರ ಸಂಖ್ಯೆ ತಗ್ಗಿಸಲು ಪರಿಣಾಮಕಾರಿ ಕ್ರಮಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ ಜಿಲ್ಲಾಡಳಿತಕ್ಕೆ ಸೂಚಿಸಿದರು.
ದಾವಣಗೆರೆಯಲ್ಲಿ ಎರಡು ವೈದ್ಯಕೀಯ ಕಾಲೇಜುಗಳು, ಉತ್ತಮ ಆಸ್ಪತ್ರೆಗಳಿದ್ದರೂ ಈ ಸ್ಥಿತಿ ಏಕೆ ಎಂದು ಪ್ರಶ್ನಿಸಿದರು.
ವೀಡಿಯೋ ಕಾನ್ಫರೆನ್ಸ್ ಮೂಲಕ ಸೋಮವಾರ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ, ರಾಜ್ಯದ ಸರಾಸರಿ ಮರಣ ಪ್ರಮಾಣ ಶೇ.2.1ರಷ್ಟಿದ್ದರೆ ಜಿಲ್ಲೆಯಲ್ಲಿ ಶೇ.3.63 ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ದಾವಣಗೆರೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುವ ಸಂಭವವಿದೆ ಎಂದು ಕೆಲ ತಜ್ಞರು ತಿಳಿಸಿದ್ದು, ಆಸ್ಪತ್ರೆಯಲ್ಲಿ ಸಾಕಷ್ಟು ಹಾಸಿಗೆ, ಆಂಬುಲೆನ್ಸ್, ವೆಂಟಿಲೇಟರ್ ಇನ್ನಿತರ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಮಳೆಗಾಲ ಚುರುಕಾಗಿರುವುದರಿಂದ ನಗರದಲ್ಲಿ ರೋಗ ರುಜಿನಗಳು ಹೆಚ್ಚಾಗುವ ಸಂಭವ ಇರುತ್ತದೆ. ಪಾಲಿಕೆಯಿಂದ ನಗರದ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಬೇಕು. ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ, ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಕ್ರಮವಹಿಸಬೇಕು ಎಂದರು.
ರೈತರಿಗೆ ಬಿತ್ತನೆಬೀಜ, ರಸಗೊಬ್ಬರ ಇತರೆ ವಸ್ತುಗಳ ಪೂರೈಕೆಯಲ್ಲಿ ಲೋಪವಾಗದಂತೆ ಕ್ರಮವಹಿಸಬೇಕು. ತರಕಾರಿ ಮತ್ತು ಹೂವು ಬೆಳೆಗಾರರಿಗೆ ಪರಿಹಾರ ಧನ ಸಮರ್ಪಕವಾಗಿ ವಿತರಣೆಯಾಗಬೇಕು ಎಂದು ಹೇಳಿದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಜಿಲ್ಲೆಗೆ 1000 ರ‌್ಯಾಪಿಡ್ ಆ್ಯಂಟಿಜೆನ್ ಕಿಟ್‌ಗಳು ಬಂದಿವೆ. ಒಂದು ವಾರದಲ್ಲಿ 5ರಿಂದ 6 ಮರಣ ಸಂಭವಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಮಟ್ಟದಲ್ಲಿ ತಜ್ಞರನ್ನೊಳಗೊಂಡ ಮರಣ ಆಡಿಟ್ ಸಮಿತಿ ರಚಿಸಿ ವಿಶ್ಲೇಷಣೆ ನಡೆಸಲಾಗಿದೆ. ಹೈ ಡೆತ್ ಪಾಕೆಟ್ಸ್‌ಗಳನ್ನು ಗುರುತಿಸಿ ತಂಡಗಳನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶಾಸಕರಾದ ಪ್ರೊ.ಲಿಂಗಣ್ಣ ಮತ್ತು ರಾಮಪ್ಪ ಮಾತನಾಡಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಕಾರ್ಯ ಇನ್ನೂ ಪರಿಣಾಮಕಾರಿಯಾಗಬೇಕೆಂದು ಸೂಚಿಸಿದರು.
ಸಿಇಒ ಪದ್ಮಾ ಬಸವಂತಪ್ಪ ಮಾತನಾಡಿ, ಪ್ರತಿ ಗ್ರಾಪಂ ಮತ್ತು ಗ್ರಾಮಗಳಲ್ಲಿ ಒಂದೊಂದು ಟಾಸ್ಕ್‌ಫೋರ್ಸ್ ಸಮಿತಿ ರಚಿಸಿದ್ದು ಪಿಡಿಒ ಮತ್ತು ಆಡಳಿತಾಧಿಕಾರಿಗಳಿಗೆ ಜವಾಬ್ದಾರಿ ನೀಡಲಾಗಿದೆ ಎಂದರು.
ಎಸ್‌ಪಿ ಹನುಮಂತರಾಯ ಮಾತನಾಡಿದರು. ಎಡಿಸಿ ಪೂಜಾರ ವೀರಮಲ್ಲಪ್ಪ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಎಸಿ ಮಮತಾ ಹೊಸಗೌಡರ್, ಡಿಎಚ್‌ಒ ಡಾ. ರಾಘವೇಂದ್ರಸ್ವಾಮಿ, ಡಿಎಸ್‌ಒ ಡಾ.ರಾಘವನ್, ಡಿಎಸ್ ಡಾ.ನಾಗರಾಜ್ ಇದ್ದರು.
ಇದುವರೆಗೆ 29 ಮರಣ ಸಂಭವಿಸಿದ್ದು, ಇದರಲ್ಲಿ 5 ಮಂದಿ ಹೊರ ಜಿಲ್ಲೆಯವರಾಗಿದ್ದಾರೆ. ಕೇವಲ ಒಂದು ಪ್ರಕರಣ ಮಾತ್ರ ಕೋವಿಡ್ ಮರಣವಾಗಿದ್ದು ಉಳಿದವು ಕೋಮಾರ್ಬಿಡಿಟಿಗೆ ಸಂಬಂಧಿಸಿದವು.
> ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ