

ದಾವಣಗೆರೆ : ಜಾನಪದ ತಜ್ಞ, ದಾವಣಗೆರೆಯ ಬಾಪೂಜಿ ವಿದ್ಯಾಸಂಸ್ಥೆಯ ನಿರ್ದೇಶಕ ಡಾ. ಎಂ.ಜಿ. ಈಶ್ವರಪ್ಪ (74) ಅನಾರೋಗ್ಯದಿಂದ ಶನಿವಾರ ಸಂಜೆ ಬೆಂಗಳೂರಿನಲ್ಲಿ ನಿಧನರಾದರು.
ಅವರಿಗೆ ಪತ್ನಿ, ಒಬ್ಬ ಪುತ್ರ, ಒಬ್ಬ ಪುತ್ರಿ ಇದ್ದಾರೆ. ಭಾನುವಾರ ಬೆಳಗ್ಗೆಯಿಂದ ಮಧ್ಯಾಹ್ನ 1.30 ರ ವರೆಗೆ ವಿದ್ಯಾನಗರದ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗುವುದು. ಮಧ್ಯಾಹ್ನ 2 ಗಂಟೆಗೆ ಶಾಮನೂರಿನ ಹಿಂದು ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಈಶ್ವರಪ್ಪ ಅವರು ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ನಾಟಕ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಅವರಿಗೆ ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಫೆಲೋಶಿಪ್, ಕರ್ನಾಟಕ ಜಾನಪದ ಅಕಾಡೆಮಿಯ ‘ತಜ್ಞ’ ಪ್ರಶಸ್ತಿ, ಕು ಶಿ ಹರಿದಾಸ ಭಟ್ಟ ಜಾನಪದ ಪ್ರಶಸ್ತಿ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ (2020), ದಾವಣಗೆರೆ ಜಿಲ್ಲೆಯ ‘ಮಹಲಿಂಗರಂಗ’ ಪ್ರಶಸ್ತಿ ಲಭಿಸಿವೆ.
ದಾವಣಗೆರೆಯಲ್ಲಿ ಪ್ರತಿಮಾ ಸಭಾ ಸಂಸ್ಥೆಯನ್ನು ಕಟ್ಟಿ ಬೆಳೆಸುವ ಮೂಲಕ ರಂಗಭೂಮಿ ಕ್ಷೇತ್ರಕ್ಕೂ ಕೊಡುಗೆ ನೀಡಿದ್ದರು. ಹಿರಿಯ ಜಾನಪದ ವಿದ್ವಾಂಸ ಜೀ.ಶಂ. ಪರಮಶಿವಯ್ಯ ಮಾರ್ಗದರ್ಶನದಲ್ಲಿ ‘ಚಿತ್ರದುರ್ಗ ಜಿಲ್ಲಾ ವ್ಯವಸಾಯ ಜಾನಪದ’ ವಿಷಯದ ಬಗ್ಗೆ ಪಿಎಚ್.ಡಿ. ಪಡೆದಿದ್ದರು.