

ದಾವಣಗೆರೆ : ಜಿಲ್ಲೆಯ ಹರಿಹರ ತಾಲೂಕಿನ ಕುಂಬಳೂರು ಗ್ರಾಮದಲ್ಲಿ ಸೋಮವಾರ ಮಧ್ಯರಾತ್ರಿ ಮನೆಯೊಂದರ ಗೋಡೆ ಕುಸಿದು ಸ್ಫೂರ್ತಿ ಎಂಬ 15 ತಿಂಗಳ ಮಗು ಮೃತಪಟ್ಟಿದೆ.
ತಂದೆ ಕೆಂಚಪ್ಪ ಅವರಿಗೆ ತೀವ್ರ ಗಾಯಗಳಾಗಿದ್ದು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ ಲಕ್ಷ್ಮೀದೇವಿ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಮಗುವಿನ ತಂದೆ, ತಾಯಿ ಕೂಲಿ ಮಾಡಿ ಜೀವನ ಸಾಗಿಸುತ್ತಾರೆ.
ಈ ಕುಟುಂಬದವರು ಹೆಂಚಿನ ಮನೆಯಲ್ಲಿ ವಾಸವಿದ್ದು ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಗೋಡೆಗಳು ತೇವಗೊಂಡು ಶಿಥಿಲವಾಗಿದ್ದವು. ರಾತ್ರಿ ಒಳಗೋಡೆ ಕುಸಿದಿದ್ದು ಅಲ್ಲಿ ಮಲಗಿದ್ದ ಮಗು ಸ್ಫೂರ್ತಿ ಮೃತಪಟ್ಟಳು.
ಅದೇ ತಾಲೂಕಿನ ಲಕ್ಕಶೆಟ್ಟಿ ಹಳ್ಳಿ ಗ್ರಾಮದಲ್ಲಿ ರೈತರು ಹೊಲಕ್ಕೆ ಹೋಗಲು ಬಳಸುವ ಸೇತುವೆ ಮಂಗಳವಾರ ಬೆಳಗ್ಗೆ ಕುಸಿದಿದೆ. ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಹೆಚ್ಚಳವಾಗಿದೆ.