

ದಾವಣಗೆರೆ : ವಿಶ್ವಗುರು ಬಸವಣ್ಣ ಜಗತ್ತಿನಲ್ಲಿ ತುಂಬಿದ್ದ ಅಸಮಾನತೆಯ ಕಗ್ಗತ್ತಲನ್ನು ಹೊಡೆದೋಡಿಸಿದರು ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ, ಬಸವಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಒಂದು ಜಾತಿ ಶ್ರೇಷ್ಠ, ಮತ್ತೊಂದು ಕನಿಷ್ಠ ಎಂಬುದರ ವಿರುದ್ಧ ಬಸವಣ್ಣ 12ನೇ ಶತಮಾನದಲ್ಲಿಯೇ ಹೋರಾಡಿದರು ಎಂದು ತಿಳಿಸಿದರು. ಗಾಂಧೀಜಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದರೆ, ಬಸವಣ್ಣ ಸಂವಿಧಾನದ ಆಶಯದಂತೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದಡಿಯಲ್ಲಿ ಶೋಷಣೆ, ಅಸಮಾನತೆ, ಅಸ್ಪೃಶ್ಯತೆ ವಿರುದ್ಧ ಹೋರಾಡಿದರು. ಹಾಗಾಗಿ ಅವರನ್ನು ವಿಶ್ವದ ಮೊದಲ ಸಮಾನತೆಯ ಹರಿಕಾರ, ಮಾನವ ಹಕ್ಕುಗಳ ಹೋರಾಟಗಾರ, ಮಹಾನ್ ಮಾನವತಾವಾದಿ ಎನ್ನಬಹುದು. ಕಾಯಕ ತತ್ವವನ್ನು ಜಗತ್ತಿಗೆ ಸಾರಿದ ಅವರು, ಆ ತತ್ವದಲ್ಲಿ ಮೇಲು, ಕೀಳು ಇಲ್ಲ. ಕಾಯಕದಿಂದ ಮಾತ್ರ ಬದುಕು ಹಸನಾಗಲು ಸಾಧ್ಯ. ಆದ್ದರಿಂದ ವ್ರತ ನಿಂತರೂ, ಕಾಯಕ ಸೇವೆ ನಿಲ್ಲಬಾರದು. ಕಾಯಕ ದಾಸೋಹ ನಿಷ್ಠೆಯಿಂದಲೇ ಆತ್ಮ ತೃಪ್ತಿ ಹೊಂದಬೇಕು. ಇಂತಹ ಮಹಾನ್ ವ್ಯಕ್ತಿತ್ವವುಳ್ಳ ಜಗಜ್ಯೋತಿ ಬಸವಣ್ಣನ ತತ್ವಗಳನ್ನು ಅಳವಡಿಸಿಕೊಂಡಲ್ಲಿ ಜೀವನದಲ್ಲಿ ಶಾಂತಿ, ಸುವ್ಯವಸ್ಥೆ, ಪ್ರೀತಿ-ಸಹಬಾಳ್ವೆಯಿಂದ ಬಾಳಲು ಸಾಧ್ಯ ಎಂದರು. ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ವಿಶ್ವದಲ್ಲಿ ಕಾಯಕ ದಾಸೋಹದ ಮೂಲಕ ತನ್ನದೇ ಆದ ಛಾಪು ಮೂಡಿಸಿದ ಮಹಾನ್ ದಾರ್ಶನಿಕ ವಿಶ್ವಗುರು ಬಸವಣ್ಣ. 12ನೇ ಶತಮಾನದ ಅನುಭವ ಮಂಟಪವು ಎಲ್ಲ ಸಮಾಜದ ಶರಣ, ಶರಣೆಯರನ್ನು ಒಳಗೊಂಡಿತ್ತು ಎಂದು ತಿಳಿಸಿದರು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿ, ಸಮಾಜದಲ್ಲಿ ಬದಲಾವಣೆ ತರಲು, 12ನೇ ಶತಮಾನದಲ್ಲಿ ಬಸವಣ್ಣ ಮೂಢನಂಬಿಕೆ, ಅಸಮಾನತೆ, ವಿರುದ್ಧ ಹೋರಾಡಿದ ನೇತಾರ. ಅವರು ಹೇಳಿದಂತೆ ದಯವೇ ಧರ್ಮದ ಮೂಲವಯ್ಯ ಎಂಬ ವಚನವನ್ನು ಅರ್ಥ ಮಾಡಿಕೊಂಡಲ್ಲಿ ಶಾಂತಿ, ಸುವ್ಯವಸ್ಥೆಯಿಂದ ಜೀವನ ಸಾಗಿಸಬಹುದು ಎಂದು ಹೇಳಿದರು. ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಬಿ. ಇಟ್ನಾಳ್, ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಹೆಚ್ಚುವರಿ ಎಸ್ಪಿ ವಿಜಯ ಕುಮಾರ್ ಎಂ. ಸಂತೋಷ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಸೆನೆಟ್ ಸದಸ್ಯ ಪ್ರಶಾಂತ್, ಎಂ. ಶಿವಕುಮಾರ್, ಪರಮೇಶ್ವರಪ್ಪ ಸೇರಿದಂತೆ ಸಮಾಜದ ಮುಖಂಡರು ಇದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ಸ್ವಾಗತಿಸಿದರು. ಬಸವ ಕಲಾ ಲೋಕ ತಂಡದವರು ಗೀತಗಾಯನ ಪ್ರಸ್ತುತಪಡಿಸಿದರು.