ಪ್ರಾಕೃತಿಕ ವಿಕೋಪ ತಡೆಗೆ ಮುಂಜಾಗ್ರತೆ ಅಗತ್ಯ

dvg-mansoon-16-1.jpg
Published on

ದಾವಣಗೆರೆ : ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಮಳೆಯ ಸಮಯದಲ್ಲಿ ಪ್ರಾಕೃತಿಕ ವಿಕೋಪಗಳಿಂದ ಮಾನವ ಜೀವ ಹಾನಿ, ಜಾನುವಾರು ಹಾಗೂ ಆಸ್ತಿ ಹಾನಿಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ಕೈಗೂಳ್ಳುವಂತೆ ಮತ್ತು ವಿಕೋಪ ಸಂಭವಿಸಿದ ಸಮಯದಲ್ಲಿ ಸಾರ್ವಜನಿಕರ ರಕ್ಷಣೆಗೆ ತುರ್ತಾಗಿ ಸ್ಪಂದಿಸುವಂತೆ ಎಲ್ಲ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಸೂಚಿಸಿದರು.
 ಮುಂಗಾರು ಮಳೆ ಮುಂಜಾಗ್ರತೆ ಕ್ರಮಗಳ ಕುರಿತಂತೆ ಮಂಗಳವಾರ ಜಿಲ್ಲಾಡಳಿತ ಭವನದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಸಭೆಯಲ್ಲಿ ಮಾತನಾಡಿದರು.
 ಕಳೆದ ವರ್ಷ ಹೆಚ್ಚು ಮಳೆ ಸುರಿದ ಸಂದರ್ಭದಲ್ಲಿ ಉಂಟಾದ ತೊಂದರೆಗಳು, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಸಾರ್ವಜನಿಕರು ಕಷ್ಟ ಅನುಭವಿಸಿರುವ ಪ್ರಕರಣಗಳನ್ನು ಗಮನದಲ್ಲಿರಿಸಿಕೊಂಡು ಅಂತಹ ಪ್ರದೇಶ ಗುರುತಿಸಬೇಕು. ಈ ಬಾರಿಯ ಮಳೆಗಾಲದಲ್ಲಿ ಸಾರ್ವಜನಿಕರು ಅಂತಹ ತೊಂದರೆಗಳನ್ನು ಅನುಭವಿಸದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
 ಜಿಲ್ಲೆಯ ಬಹುತೇಕ ಗ್ರಾಮಗಳ ಮಧ್ಯ ಭಾಗದಲ್ಲಿ ಕೆರೆ ಕಟ್ಟೆಗಳು, ಹೊಂಡ, ಕಾಲುವೆಗಳು ನಿರ್ಮಾಣವಾಗಿರುವುದರಿಂದ ರಾತ್ರೋ ರಾತ್ರಿ ಹೆಚ್ಚು ಮಳೆಯಾದರೆ ಮನೆಗಳಿಗೆ ನೀರು ನುಗ್ಗಿ ಹೆಚ್ಚು ತೊಂದರೆ ಉಂಟಾಗುತ್ತದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮುಂಗಾರು ಪ್ರರಂಭವಾಗುವುದಕ್ಕಿಂತ ಮುಂಚೆ ಪರಿಶೀಲಿಸಬೇಕು ಎಂದರು.
 ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ್ ಇಟ್ನಾಳ್, ಹೆಚ್ಚುವರಿ ಎಸ್ಪಿ ರಾಮಗೊಂಡ ಬಸರಗಿ, ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಇನ್ನಿತರ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net