

ದಾವಣಗೆರೆ : ಜಿಲ್ಲೆಯಲ್ಲಿ ಜಾತಿಗಣತಿ ಪ್ರಕ್ರಿಯೆ ಶೇ. 85 ರಷ್ಟು ಮುಗಿದಿದೆ. 3 ದಿನಗಳಲ್ಲಿ ಶೇ. 100 ರಷ್ಟು ಸಾಧನೆ ಆಗಲಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, 60 ಸಾವಿರ ವಾಣಿಜ್ಯ ಮಳಿಗೆ, ಸಂಕೀರ್ಣಗಳಿವೆ. ಅವುಗಳೂ ಸೇರಿದರೆ ಶೇ. 98 ರಷ್ಟಾಗುತ್ತದೆ. ಪ್ರಕ್ರಿಯೆ ಅಂತಿಮಗೊಳಿಸಲು ಮೇಲ್ವಿಚಾರಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಸಕ್ಕರೆ ಕಾರ್ಖಾನೆಗಳನ್ನು ಪ್ರತಿ ವರ್ಷ ಅಕ್ಟೋಬರ್‌ನಿಂದಲೇ ಆರಂಭಿಸಲಾಗುತ್ತಿತ್ತು. ಈ ವರ್ಷ ನವೆಂಬರ್‌ನಿಂದ ಎಲ್ಲ ಕಾರ್ಖಾನೆಗಳನ್ನು ಆರಂಭಿಸಬೇಕು ಎಂದು ಸರ್ಕಾರ ಆದೇಶಿಸಿದೆ ಎಂದು ತಿಳಿಸಿದರು. ದಕ್ಷಿಣ ಕರ್ನಾಟಕದಲ್ಲಿ ಮಾತ್ರ ಅಕ್ಟೋಬರ್‌ನಲ್ಲಿ ಆರಂಭಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ದಾವಣಗೆರೆ ದಕ್ಷಿಣವೂ ಅಲ್ಲ, ಉತ್ತರವೂ ಅಲ್ಲ, ಮಧ್ಯ ಕರ್ನಾಟಕದಲ್ಲಿದೆ. ಜಿಲ್ಲೆಯಲ್ಲಿ ಕಬ್ಬು ನಾಟಿ ಮಾಡಿ 12 ತಿಂಗಳು ಕಳೆದಿವೆ. 12 ರಿಂದ 14 ತಿಂಗಳೊಳಗೆ ಕಟಾವು ಮಾಡಬೇಕು. ಈ ಹಿನ್ನೆಲೆಯಲ್ಲಿ ಈಗಾಗಲೇ ಕಬ್ಬು ಸಚಿವ ಶಿವಾನಂದ ಪಾಟೀಲ, ಇಲಾಖೆಯ ಕಾರ್ಯದರ್ಶಿ ಮತ್ತು ಆಯುಕ್ತರಿಗೂ ಮನವಿ ಮಾಡಿದ್ದೇನೆ. ಕಡತ ಸರ್ಕಾರದ ಹಂತದಲ್ಲಿದೆ. ಮಧ್ಯ ಕರ್ನಾಟಕಕ್ಕೆ ಪ್ರತ್ಯೇಕವಾಗಿ ಆದೇಶ ಮಾಡುವಂತೆ ಕೇಳಿಕೊಂಡಿದ್ದೇನೆ. 2-3 ದಿನಗಳಲ್ಲಿ ಹೊಸ ಆದೇಶ ಆಗುವ ನಿರೀಕ್ಷೆಯಿದೆ ಎಂದರು.