

ದಾವಣಗೆರೆ : ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರು ನಿರಂತರ ಅಧ್ಯಯನದಿಂದ ತಮ್ಮ ಜ್ಞಾನದ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡು, ಶಿಕ್ಷಣದ ಅಸ್ತ್ರದಿಂದ ಶೋಷಿತ ವರ್ಗಗಳಿಗೆ ಧ್ವನಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹೇಳಿದರು. ಜಿಲ್ಲಾಡಳಿತ, ಜಿ.ಪಂ, ಸಮಾಜ ಕಲ್ಯಾಣ ಇಲಾಖೆಯಿಂದ ಜಿಲ್ಲಾಡಳಿತ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ, ಡಾ. ಬಿ.ಆರ್. ಅಂಬೇಡ್ಕರ್ ಅವರ 68 ನೇ ಮಹಾ ಪರಿನಿರ್ವಾಣ ದಿನಾಚರಣೆಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಬಾಬಾ ಸಾಹೇಬರ ಮೂಲ ಮಂತ್ರಗಳಾದ ಶಿಕ್ಷಣ, ಸಂಘಟನೆ, ಹೋರಾಟ ಎಂಬ ಧ್ಯೇಯ ವಾಕ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿರುವ ಶೋಷಿತರು, ತುಳಿತಕ್ಕೊಳಪಟ್ಟ ವರ್ಗಗಳಿಗೆ ನ್ಯಾಯ ಕೊಡಬೇಕಾಗಿದೆ ಎಂದರು. ಪರಿನಿರ್ವಾಣ ಎಂಬುವುದು ಬೌದ್ಧ ಧರ್ಮದ ಮುಖ್ಯ ತತ್ವ ಹಾಗೂ ಗುರಿಗಳಲ್ಲಿ ಒಂದಾಗಿದೆ. ಸಂಸ್ಕೃತದಲ್ಲಿ ಪರಿನಿರ್ವಾಣಕ್ಕೆ ಸಾವಿನ ನಂತರ ನಿರ್ವಾಣ ಎಂದರ್ಥ. ಇದು ದೇಹವು ಸತ್ತ ನಂತರ ನಿರ್ವಾಣದ ಸಾಧನೆಯನ್ನು ಸೂಚಿಸುತ್ತದೆ. ಬೌದ್ಧ ಧರ್ಮದ ಪ್ರಕಾರ ನಮ್ಮ ಜೀವನದ ಕರ್ಮವನ್ನು ದೇಹದ ಮರಣದ ನಂತರ ಆತ್ಮದ ಮೂಲಕ ಮುಂದಿನ ಜನ್ಮಕ್ಕೆ ಸಾಗಿಸಲಾಗಿತ್ತದೆ ಎಂದು ತಿಳಿಸಿದರು. ಕಾರ್ಯಕ್ರಮಕ್ಕೂ ಮೊದಲು ಅಂಬೇಡ್ಕರ್ ವೃತ್ತದಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಹೆಗ್ಗೆರೆ ರಂಗಪ್ಪ ಮತ್ತು ನೀರ್ಥಡಿ ಸಂಗಡಿಗರು ಅಂಬೇಡ್ಕರ್ ಕುರಿತು ಗಾಯನ ಪ್ರಸ್ತುತ ಪಡಿಸಿದರು. ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್, ಸಿಇಒ ಸುರೇಶ್ ಬಿ. ಇಟ್ನಾಳ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ನಾಗರಾಜ, ಡಿಡಿಪಿಐ ಕೊಟ್ರೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರವಿಚಂದ್ರ, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಮುಖಂಡರಾದ ರವಿನಾರಾಯಣ, ನಂದಿಗಾವಿ ಶ್ರೀನಿವಾಸ್, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿ, ಸಿಬ್ಬಂದಿ, ಅಂಬೇಡ್ಕರ್ ಅಭಿಮಾನಿಗಳು ಇದ್ದರು.