

ದಾವಣಗೆರೆ : ಜಿಲ್ಲಾದ್ಯಂತ ದಸರಾ ಸಂಭ್ರಮ ಮನೆಮಾಡಿದೆ. ಆಯುಧ ಪೂಜೆ ಹಾಗೂ ವಿಜಯ ದಶಮಿ ಅಂಗವಾಗಿ ಸಾರ್ವಜನಿಕರು ಗುರುವಾರ ಹಬ್ಬದ ಪರಿಕರಗಳ ಖರೀದಿಯಲ್ಲಿ ತೊಡಗಿದ್ದರು. ಬೆಳಗ್ಗೆಯಿಂದಲೇ ಜನರು ಮಾರುಕಟ್ಟೆಯತ್ತ ಮುಖ ಮಾಡಿದರು. ಮುಂಜಾನೆ ಜನರ ಓಡಾಟ ಕಡಿಮೆ ಇತ್ತು. ಕ್ರಮೇಣ ಜನದಟ್ಟಣೆ ಹೆಚ್ಚಾಯಿತು. ಹಬ್ಬದ ಖರೀದಿಗೆ ಬಂದವರು ಸಂಜೆ ಮಳೆಯಲ್ಲಿ ತೊಯ್ದು ತೊಪ್ಪೆಯಾದರು. ಪ್ರವಾಸಿ ಮಂದಿರ ರಸ್ತೆ, ಹದಡಿ ರಸ್ತೆ, ಕೆ.ಆರ್. ಮಾರುಕಟ್ಟೆ, ವಾಣಿ ರೈಸ್‌ಮಿಲ್ ರಸ್ತೆ, ಎಪಿಎಂಸಿ, ನಿಟ್ಟುವಳ್ಳಿ, ನಿಜಲಿಂಗಪ್ಪ ವೃತ್ತ, ಪಿ.ಬಿ. ರಸ್ತೆ, ಶಾಮನೂರು ರಸ್ತೆ, ಚಿಗಟೇರಿ ಆಸ್ಪತ್ರೆ ಮುಂಭಾಗ ಸೇರಿ ಹಲವೆಡೆ ಬಾಳೆ ಕಂದು, ಬೂದುಗುಂಬಳ ವ್ಯಾಪಾರ ಜೋರಾಗಿತ್ತು. ಪ್ರವಾಸಿ ಮಂದಿರ ರಸ್ತೆ ವ್ಯಾಪಾರಸ್ಥರು ಮತ್ತು ಗ್ರಾಹಕರಿಂದ ಗಿಜಿಗುಡುತ್ತಿತ್ತು. ಜಯದೇವ ವೃತ್ತ ಹಾಗೂ ಪಿ.ಬಿ. ರಸ್ತೆಯ ಕಡೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಲಾಗಿತ್ತು. ಹಬ್ಬದ ಖರೀದಿಗಾಗಿ ಜನರ ಬರುವಿಕೆ ಹೆಚ್ಚಾಗುತ್ತಿದ್ದಂತೆ ಗಡಿಯಾರ ಕಂಬ, ಕೆ.ಆರ್. ಮಾರುಕಟ್ಟೆ ರಸ್ತೆಯಲ್ಲಿ ಜನದಟ್ಟಣೆ ಕಂಡುಬಂದಿತು. ಹದಡಿ ರಸ್ತೆಯಲ್ಲಿ ಕುಂಬಳಕಾಯಿ, ಹೂವು, ಬಾಳೆಕಂದು ಖರೀದಿಗಾಗಿ ವಾಹನ ಸವಾರರು ರಸ್ತೆ ಬದಿಯಲ್ಲೇ ವಾಹನಗಳನ್ನು ನಿಲ್ಲಿಸಿದ್ದರು. ವಾಹನಗಳ ಅಲಂಕಾರಕ್ಕಾಗಿ ವಿವಿಧ ವಿನ್ಯಾಸದ ಹೂವಿನ ಹಾರಗಳನ್ನು ಖರೀದಿಸುವವರ ಸಂಖ್ಯೆ ಹೆಚ್ಚಾಗಿತ್ತು. ಸಣ್ಣ ಹಾರಗಳು 150 ರೂ.ಗಳಿಂದ 500 ರೂ. ವರೆಗೂ ಮಾರಾಟವಾದವು.