

ದಾವಣಗೆರೆ : ಇಲ್ಲಿನ ವಿದ್ಯಾನಗರ ಶಿಕ್ಷಕರ ಕಾಲನಿ 10ನೇ ಕ್ರಾಸ್ ಉದ್ಯಾನವನದಲ್ಲಿನ ಶ್ರೀ ಬನ್ನಿ ಮಹಾಂಕಾಳಮ್ಮ ದೇವಾಲಯದಲ್ಲಿ ಬಡಾವಣೆ ಮಹಿಳೆಯರು ಸೇರಿ ಮಂಗಳವಾರ ನವರಾತ್ರಿ ಮಹೋತ್ಸವ ಆಚರಿಸಿದರು. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಪಾಲ್ಗೊಂಡು ಮಹಿಳೆಯರ ಪ್ರಯತ್ನಕ್ಕೆ ಸಾಥ್ ನೀಡಿದರು. ಅವರ ಕಾರ್ಯಕ್ರಮಗಳಿಗೆ ಸಹಕಾರದ ಭರವಸೆ ನೀಡಿದರು. ಈ ಬಡಾವಣೆಯ ಮಹಿಳೆಯರೇ ಸೇರಿ ಪ್ರತಿ ವರ್ಷ ಇಲ್ಲಿ ನವರಾತ್ರಿ ಮಹೋತ್ಸವ ಆಚರಿಸುತ್ತಾರೆ. ಇವರಿಗೆ ಬಡಾವಣೆಯ ಪುರುಷರು ಸಾಥ್ ನೀಡುತ್ತಾರೆ. ಸೋಮವಾರ ರಾತ್ರಿಯಿಂದಲೇ ಮಹಿಳೆಯರು ಸೇರಿ ಮಹೋತ್ಸವದ ತಯಾರಿ ಮಾಡುತ್ತಾರೆ. ಮಂಗಳವಾರ ಬೆಳಗ್ಗೆ ಗಂಗಾ ದೇವಿಯ ಪೂಜೆ ನೆರವೇರಿಸಿದರು. ನಂತರ ದೇವಿಗೆ ಅಭಿಷೇಕ ಮಾಡಲಾಯಿತು. ದಾನಿಗಳು ಈ ಬಾರಿ ದೇವಿಯ ಮುಖ ಪದ್ಮ ಹೊಸದಾಗಿ ಮಾಡಿಸಿಕೊಟ್ಟಿದ್ದರಿಂದ ಆಚರಣೆಗೆ ವಿಶೇಷ ಮೆರುಗು ಬಂದಿತ್ತು. ಈ ವೇಳೆ ಡಾ. ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ನಾನೂ ಪ್ರತಿ ದಿನ ಬೆಳಗ್ಗೆ ನಮ್ಮ ಮನೆಯ ಬಳಿಯೇ ಇರುವ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸುತ್ತೇನೆ. ನಮ್ಮ ಕುಟುಂಬ, ಸಮಾಜಕ್ಕೆ ಒಳಿತಾಗಲಿ ಎಂದು ಪ್ರಾರ್ಥಿಸುತ್ತೇನೆ. ಎಲ್ಲ ಮಹಿಳೆಯರು ತಮ್ಮ ಕುಟಂಬಕ್ಕೆ ಒಳಿತಾಗಲಿ ಎಂದು ಬನ್ನಿ ಪೂಜೆ ಮಾಡುತ್ತಾರೆ. ಇಲ್ಲಿ ಮಹಿಳೆಯರೇ ಸೇರಿ ಉತ್ಸವದ ರೀತಿ ಕಾರ್ಯಕ್ರಮ ಮಾಡುವುದು ಖುಷಿ ತಂದಿದೆ, ನಿಮ್ಮ ಎಲ್ಲ ಪ್ರಯತ್ನಕ್ಕೆ ಸಹಕಾರ ನೀಡುವುದಾಗಿ ಉತ್ಸಾಹ ತುಂಬಿದರು. ಇಲ್ಲಿನ ಗಣೇಶ ಮಂಡಳಿಯಿಂದ ಲಲಿತ ಸಹಸ್ರನಾಮ ಹಾಗೂ ಮರುಳ ಸಿದ್ದೇಶ್ವರ ಭಜನಾ ಮಂಡಳಿಯಿಂದ ಭಜನೆ ನಡೆಯಿತು. ಮಧ್ಯಾಹ್ನದ ನಂತರ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. 3 ಸಾವಿರಕ್ಕೂ ಹೆಚ್ಚು ಮಂದಿ ದಾಸೋಹ ಸ್ವೀಕರಿಸಿದರು. ಬಡಾವಣೆ ಮುಖಂಡ, ಹೋಟೆಲ್ ಉದ್ಯಮಿ ವಿಜಯ ಕುಮಾರ್, ಈಶ್ವರ್ ಇದ್ದರು.