

ದಾವಣಗೆರೆ : ರಾಜ್ಯದ ಅತಿದೊಡ್ಡ ಅಂತರ ಕಾಲೇಜು ಮೈಸೂರು ಡಾನ್ಸ್ ಲೀಗ್ 2025 ಗುಂಪು ನೃತ್ಯ ಸ್ಪರ್ಧೆಯ ಫೈನಲ್‌ನಲ್ಲಿ ದಾವಣಗೆರೆಯ ಜಿಎಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ತಂಡ ರನ್ನರ್ ಅಪ್ ಆಗಿ ಮಿಂಚಿದೆ. ಮೈಸೂರಿನ ಫೋರ್ ಫ್ರಂಟ್ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್ ಹಾಗೂ ಒನ್ ಪಾಯಿಂಟ್ ಸಲ್ಯೂಷನ್ಸ್ ವತಿಯಿಂದ ಕೆಎಸ್‌ಒಯು ಸಭಾಂಗಣದಲ್ಲಿ ಇತ್ತೀಚೆಗೆ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಸರ್ಕಾರಿ ಕಾಲೇಜುಗಳಿಂದ ಖಾಸಗಿ ವಿಶ್ವವಿದ್ಯಾಲಯಗಳ ವರೆಗೆ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನೃತ್ಯ ಪ್ರತಿಭೆ ಪ್ರದರ್ಶನಕ್ಕೆ ಸಿಕ್ಕ ಉತ್ತಮ ವೇದಿಕೆಯಲ್ಲಿ 40 ತಂಡಗಳು ಭಾಗವಹಿಸಿದ್ದವು. ಅದರಲ್ಲಿ ಜಿಎಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಕುಲದೀಪ್, ಶ್ರೇಯಾ, ಲಾವಣ್ಯ, ವೀರೇಶ್, ರೋಷನ್, ಮೇಘಾ, ನೇಹಾ, ಸಾಗರ್ ಅವರನ್ನು ಒಳಗೊಂಡ ತಂಡವು ಭಾಗವಹಿಸಿ ನಾನ್‌ಸ್ಟಾಪ್ ಎನರ್ಜಿ ಮೂಲಕ ನೃತ್ಯದ ಪ್ರತಿಭೆ ಪ್ರದರ್ಶನ ನೀಡಿ ಗಮನ ಸೆಳೆಯಿತು. ರನ್ನರ್ ಅಪ್ ಆಗಿ ಹೊರಹೊಮ್ಮಿ, 50 ಸಾವಿರ ರೂ. ನಗದು ಬಹುಮಾನ ತಮ್ಮದಾಗಿಸಿಕೊಂಡಿತು. ಜಿಎಂಯು ಪ್ರತಿನಿಧಿಗಳ ಉತ್ತಮ ಸಾಧನೆಯ ಬಗ್ಗೆ ಜಿಎಂಯು ಕುಲಾಧಿಪತಿ ಜಿ.ಎಂ. ಲಿಂಗರಾಜು, ಕುಲಪತಿ ಡಾ. ಎಸ್.ಆರ್. ಶಂಕಪಾಲ್, ಸಹ ಕುಲಪತಿ ಡಾ. ಎಚ್.ಡಿ. ಮಹೇಶಪ್ಪ, ಕುಲಸಚಿವ ಡಾ. ಸುನಿಲ್ ಕುಮಾರ್ ಬಿ.ಎಸ್, ವಿದ್ಯಾರ್ಥಿ ವ್ಯವಹಾರಗಳ ನಿರ್ದೇಶನಾಲಯದ ನಿರ್ದೇಶಕ ಡಾ. ಎಚ್.ಎಸ್. ಕಿರಣ್ ಕುಮಾರ್ ಹರ್ಷ ವ್ಯಕ್ತಪಡಿಸಿದ್ದಾರೆ.