ಬೇಗ ಭರ್ತಿಯಾಗುವುದೇ ಭದ್ರಾ ಜಲಾಶಯ?

dvg-TEJASVI-PATEL_20250530002629479.jpg
Published on

ರಮೇಶ ಜಹಗೀರದಾರ್ ದಾವಣಗೆರೆ :  ಈ ವರ್ಷ ಮುಂಗಾರು ಮಳೆ ಬೇಗ ಪ್ರವೇಶ ಆಗಿರುವುದರಿಂದ ಭದ್ರಾ ಜಲಾಶಯವೂ ಬೇಗನೆ ತುಂಬುವ ಆಶಾಭಾವನೆ ಅಚ್ಚುಕಟ್ಟಿನ ರೈತರಲ್ಲಿ ಮೂಡಿದೆ.  ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಮುಂಗಾರು ಎಂಟ್ರಿ ಕೊಡುವುದು ವಾಡಿಕೆ. ಆದರೆ ಒಂದು ವಾರ ಮೊದಲೇ ಪ್ರತ್ಯಕ್ಷವಾಗಿದೆ. ಭದ್ರಾ ಜಲಾಶಯದ ಸುತ್ತಮುತ್ತಲಿನ ಪ್ರದೇಶಗಳಲ್ಲಿ (ಕ್ಯಾಚ್‌ಮೆಂಟ್ ಏರಿಯಾ) ಭರ್ಜರಿ ಮಳೆ ಆಗುತ್ತಿರುವುದರಿಂದ ಡ್ಯಾಮ್‌ಗೆ ಒಳಹರಿವು ಈಗಾಗಲೇ ಶುರುವಾಗಿದೆ. ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಈ ಟ್ರೆಂಡ್ ಗಮನಿಸಿದರೆ ಭದ್ರೆಯ ಒಡಲು ಭರ್ತಿಯಾಗಲು ಬಹಳ ದಿನ ಕಾಯಬೇಕಿಲ್ಲ.  ಬುಧವಾರ 6778 ಕ್ಯೂಸೆಕ್ ನೀರು ಹರಿದು ಬಂದಿದ್ದು ಜಲಾಶಯದ ಮಟ್ಟ 138.6 ಅಡಿ ಇತ್ತು. 25.8 ಟಿಎಂಸಿ ನೀರಿನ ಸಂಗ್ರಹವಿತ್ತು. ಕಳೆದ ವರ್ಷ ಇದೇ ದಿನಕ್ಕೆ 117.2 ಅಡಿ ನೀರಿತ್ತು (14.31 ಟಿಎಂಸಿ).  ಪ್ರತಿ ಮುಂಗಾರು ಹಂಗಾಮಿನಲ್ಲೂ ರೈತರಿಗೆ ಒಂದೇ ಧ್ಯಾನ, ಡ್ಯಾಮ್ ಯಾವಾಗ ತುಂಬುತ್ತದೆ ಎಂಬುದೇ ಪ್ರಶ್ನೆ. ರೈತರು ಸಸಿಮಡಿ ಸಿದ್ಧಪಡಿಸಿಕೊಂಡು ನಾಟಿ ಮಾಡಲು ಕಾತರದಿಂದ ನೀರಿಗಾಗಿ ಕಾಯುತ್ತಾರೆ.  ಬಹುಶಃ ಈ ಬಾರಿ ಅಂಥ ಪರಿಸ್ಥಿತಿ ಬರಲಾರದು. ಅಚ್ಚುಕಟ್ಟಿನಲ್ಲಿ ಇನ್ನೂ ಬೇಸಿಗೆಯ ಭತ್ತದ ಕಟಾವೇ ಮುಗಿದಿಲ್ಲ. ಈ ಹಂತದಲ್ಲೇ ಡ್ಯಾಮ್‌ಗೆ ಒಳಹರಿವು ಬರತೊಡಗಿದೆ. ಮುಂಗಾರು ಬೆಳೆಗೆ ಹೆಚ್ಚು ಕಾಯುವ ಸಂದರ್ಭ ಇರಲಾರದು ಎನ್ನಲಾಗುತ್ತಿದೆ.  ‘ಮುಂಗಾರು ಬೇಗನೆ ಬಂದಿರುವುದು ಆಶಾದಾಯಕವಾಗಿದೆ. ಜಲಾಶಯ ಬೇಗನೆ ಭರ್ತಿಯಾದರೆ ರೈತರಿಗೆ ಸಕಾಲಕ್ಕೆ ನೀರು ಸಿಗುತ್ತದೆ’ ಎಂದು ಜಲ ಸಂಪನ್ಮೂಲ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಆರ್.ಬಿ. ಮಂಜುನಾಥ್ ತಿಳಿಸಿದರು.  ...  (ಬಾಕ್ಸ್)  ರೈತರ ಜೀವನಾಡಿ  ಭದ್ರಾ ಜಲಾಶಯವು ಅಚ್ಚುಕಟ್ಟು ರೈತರ ಜೀವನಾಡಿಯಾಗಿದೆ. ಸಂಗ್ರಹಣಾ ಸಾಮರ್ಥ್ಯ 71.535 ಟಿ.ಎಂ.ಸಿ ಆಗಿದ್ದು ನೀರಿನ ಗರಿಷ್ಠ ಮಟ್ಟ 186 ಅಡಿಗಳಾಗಿದೆ. 1965ನೇ ಸಾಲಿನಿಂದ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ಬೇಸಿಗೆ ಬೆಳೆಗಳಿಗೆ 1,02,504 ಹೆಕ್ಟೇರ್, ಮುಂಗಾರು ಹಂಗಾಮಿನಲ್ಲಿ 1,05,570 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸಲಾಗುತ್ತದೆ. 2023-24ನೇ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ನೀರಿನ ಕೊರತೆ ಉಂಟಾಗಿತ್ತು. 2024 ರಲ್ಲಿ ಜಲಾಶಯ ಭರ್ತಿಯಾಗಿತ್ತು.  ಭದ್ರಾ ಅಚ್ಚುಕಟ್ಟು ಪ್ರದೇಶ ಸುಮಾರು 2.65 ಲಕ್ಷ ಎಕರೆಯಿದ್ದು ದಾವಣಗೆರೆ ಜಿಲ್ಲೆಯಲ್ಲೇ ಸಿಂಹಪಾಲಿದೆ. ಅಚ್ಚುಕಟ್ಟಿನ ರೈತರು ಪ್ರಮುಖ ಆಹಾರ ಬೆಳೆಯಾದ ಭತ್ತ, ವಾಣಿಜ್ಯ ಬೆಳೆಗಳಾದ ಅಡಕೆ, ತೆಂಗು, ಕಬ್ಬು ತ್ಯಾದಿ ಬೆಳೆಗಳನ್ನು ಬೆಳೆಯುತ್ತಾರೆ. ಹಲವಾರು ಕುಡಿಯುವ ನೀರಿನ ಯೋಜನೆಗಳಿಗೂ ಭದ್ರಾ ನೀರು ಪ್ರಮುಖ ಮೂಲವಾಗಿದೆ.  ...  (ಬಾಕ್ಸ್)  ಆರ್ಥಿಕತೆಗೆ ಚೈತನ್ಯ  ಭದ್ರಾ ಜಲಾಶಯ ತುಂಬುವುದಕ್ಕೂ, ಜಿಲ್ಲೆಯ ಆರ್ಥಿಕತೆಗೂ ನೇರ ಸಂಬಂಧವಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಹಸಿರು ನಳನಳಿಸುವುದರಿಂದ ಈ ಭಾಗದ ಆರ್ಥಿಕ ಚಟುವಟಿಕೆಗಳು ಗರಿಗೆದರುತ್ತವೆ.  ಕೃಷಿ ಕಾರ್ಮಿಕರಿಗೆ ಕೈತುಂಬ ಕೆಲಸ ಸಿಗುತ್ತದೆ. ರೈಸ್ ಮಿಲ್‌ಗಳಲ್ಲಿ ಉತ್ಪಾದನೆ ನಡೆಯುತ್ತದೆ. ವ್ಯಾಪಾರ, ಉದ್ಯಮ ಕ್ಷೇತ್ರಗಳೂ ಬಲಗೊಳ್ಳುತ್ತವೆ. ಹಣ್ಣು, ತರಕಾರಿ, ಕಿರಾಣಿ, ಔಷಧ, ಬಟ್ಟೆ ಅಂಗಡಿಗಳಲ್ಲಿ ವ್ಯಾಪಾರ ಚುರುಕಾಗುತ್ತದೆ. ತಳ್ಳುಗಾಡಿಗಳಲ್ಲಿ ವ್ಯಾಪಾರ ಮಾಡುವವರಿಗೂ ಆರ್ಥಿಕ ಚೈತನ್ಯ ದೊರೆಯುತ್ತದೆ.  ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಲವಲವಿಕೆ ಮೂಡುತ್ತದೆ. ಅಡಕೆ, ತೆಂಗಿನಕಾಯಿ, ತರಕಾರಿ ಮುಂತಾದ ಸರಕುಗಳ ಮಾರಾಟ ಹೆಚ್ಚಾಗುತ್ತದೆ. ಕಾರ್ಮಿಕರು, ಹಮಾಲರಿಗೆ ಉದ್ಯೋಗಗಳು ಸೃಷ್ಟಿಯಾಗುತ್ತವೆ. ದಲ್ಲಾಳಿ ಅಂಗಡಿಗಳಲ್ಲಿ ವಹಿವಾಟು ಜೋರಾಗುತ್ತದೆ.  ...    (ಕೋಟ್)  ಮುಂಗಾರು ಬೇಗ ಪ್ರವೇಶ ಆಗಿರುವುದನ್ನು ಇತ್ತೀಚಿನ ವರ್ಷಗಳಲ್ಲಿ ನೋಡಿರಲಿಲ್ಲ. ಡ್ಯಾಮ್ ಬೇಗ ಭರ್ತಿಯಾದರೆ ಭತ್ತದ ಸಸಿಮಡಿ ಮಾಡಿಕೊಳ್ಳುವುದು ಸೇರಿದಂತೆ ಎಲ್ಲ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಈ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು. ಕೆರೆಗಳನ್ನು ತುಂಬಿಸಿಕೊಳ್ಳುವ ಮೂಲಕ ನೀರನ್ನು ಕಾಪಾಡಿಕೊಳ್ಳುವ ಅಗತ್ಯವಿದೆ.   ತೇಜಸ್ವಿ ಪಟೇಲ್, ರೈತ ಮುಖಂಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net