

ದಾವಣಗೆರೆ : ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್‌ನ ಚೈನ್ ಲಿಂಕ್ ಮುರಿದು ಬಿದ್ದ ಘಟನೆಯ ಬಗ್ಗೆ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಕಳವಳ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರ ಭದ್ರಾ ಜಲಾಶಯದ ಸುರಕ್ಷತೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ. ಡ್ರಿಪ್ ಯೋಜನೆಯಡಿ ಭದ್ರಾ ಡ್ಯಾಮ್‌ನ ಸುರಕ್ಷತೆಗಾಗಿ 100 ಕೋಟಿ ರೂ. ಬಿಡುಗಡೆ ಮಾಡುವಂತೆ ಕೇಂದ್ರದ ಜಲ ಆಯೋಗ ಪ್ರಸ್ತಾವನೆ ಸಲ್ಲಿಸಿದೆ. ಆದರೆ ರಾಜ್ಯದ ಕಾಂಗ್ರೆಸ್ ಸರ್ಕಾರ ನೀರಾವರಿ ನಿಗಮದ ಮೂಲಕ ಕೇಂದ್ರ ಸರ್ಕಾರಕ್ಕೆ ಮೊರೆ ಹೋಗಿ ಸುಮ್ಮನೆ ಕುಳಿತಿದೆ. ರಾಜ್ಯ ಸರ್ಕಾರವೇ ಆ ಹಣವನ್ನು ಬಿಡುಗಡೆ ಮಾಡಬೇಕು ಎಂದು ಜಿಲ್ಲಾ ಬಿಜೆಪಿ ವಕ್ತಾರ ಬಿ.ಎಂ. ಸತೀಶ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ರಾಜ್ಯ ಸರ್ಕಾರ ಜಲಾಶಯಗಳ ಭದ್ರತೆಗೆ ಯಾವುದೇ ದೂರದೃಷ್ಟಿಯ ಯೋಜನೆ ಹಮ್ಮಿಕೊಂಡಿಲ್ಲ. ಜಲಸಂಪನ್ಮೂಲ ಖಾತೆ ಹೊಂದಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಲ್ಲುಬಂಡೆಯಂತಿದ್ದು, ರೈತಪರ ಕಾಳಜಿ ಹೊಂದಿಲ್ಲ. ಕೇವಲ ಗ್ಯಾರಂಟಿ ಯೋಜನೆಗಳ ಮೆಲುಕು ಹಾಕುತ್ತಾ ರೈತರನ್ನು ದಿವಾಳಿ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು. ಭದ್ರಾ ನೀರು ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದರೂ, ಉಭಯ ಜಿಲ್ಲಾ ಸಚಿವರುಗಳಾದ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತು ಮಧು ಬಂಗಾರಪ್ಪ ಎಚ್ಚೆತ್ತುಕೊಂಡಿಲ್ಲ ಎಂದು ಅಭಿಪ್ರಾಯಪಟ್ಟರು. ಒಮ್ಮೆಲೇ ನದಿಗೆ ನೀರನ್ನು ವ್ಯರ್ಥವಾಗಿ ಹರಿಸಲಾಗುತ್ತಿದೆ. ಇದರಿಂದ ನದಿಯ ಆಸುಪಾಸಿನಲ್ಲಿರುವವರಿಗೆ ತೊಂದರೆಯಾಗುತ್ತದೆ ಎಂಬ ಕನಿಷ್ಠ ಜ್ಞಾನವೂ ಇಲ್ಲದಂತಾಗಿದೆ. ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿರುವ ಕೆರೆ ಕಟ್ಟೆಗಳಿಗೆ ಇಂದಿಗೂ ಒಂದು ಹನಿ ನೀರು ಬಂದಿಲ್ಲ. ನೀರು ಇದ್ದಾಗ ಕೆರೆ ಕಟ್ಟೆಗಳನ್ನು ತುಂಬಿಸಿಕೊಂಡರೆ ಒಂದು ಸಣ್ಣ ಕೆರೆ ಕನಿಷ್ಠ 300 ಎಕರೆ ಜಮೀನಿಗೆ ನೀರುಣಿಸುತ್ತದೆ. ಸುತ್ತ ಏಳೆಂಟು ಕಿ.ಮೀ ದೂರ ಅಂತರ್ಜಲ ಮಟ್ಟ ಕುಸಿಯುವುದಿಲ್ಲ ಎಂದು ತಿಳಿಸಿದರು. ಭದ್ರಾ ಡ್ಯಾಮ್ ಕೂಡಾ ಸುರಕ್ಷತೆ ಹೊಂದಿಲ್ಲ. 62 ವರ್ಷಗಳ ಹಿಂದೆ ಗಾರೆ, ಕಲ್ಲು ಸುಣ್ಣ ಬಳಸಿ ಜಲಾಶಯ ನಿರ್ಮಿಸಲಾಗಿದೆ. ಸಹಜವಾಗಿ ತಳದಲ್ಲಿ ಸೋರುತ್ತಿದೆ. ಇದನ್ನು ತಡೆಗಟ್ಟಬೇಕು. ಹಳೆಯಾದಾಗಿರುವ ಗೇಟ್ಗಳನ್ನು ಸರಿಪಡಿಸಿ ಗಟ್ಟಿಗೊಳಿಸಬೇಕು. ಜರ್ಮನ್ ತಂತ್ರಜ್ಞಾನದಡಿ ಸಿದ್ಧಪಡಿಸಿರುವ ಡ್ಯಾಮ್ ನಿರ್ವಹಣೆಯ ಕ್ರೇನ್‌ಗಳನ್ನು ಸುಸ್ಥಿತಿಯಲ್ಲಿಡಬೇಕು. ಸೇತುವೆ ಬಳಿ ಆಗಾಗ ಕುಸಿಯುವ ತಡೆಗೋಡೆಗಳನ್ನು ಭದ್ರಗೊಳಿಸಬೇಕು. ಜಲಾಶಯದ ಸುತ್ತಲೂ ಬೇಲಿ ನಿರ್ಮಿಸಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶಿವರಾಜ್ ಪಾಟೀಲ್, ರೈತ ಮೋರ್ಚಾ ಮುಖಂಡ 6ನೇ ಕಲ್ಲು ವಿಜಯಕುಮಾರ ಇದ್ದರು.