ಸೈಕಲ್ ಬಳಕೆಯಿಂದ ಪರಿಸರ ಮಾಲಿನ್ಯ ತಡೆ ಸಾಧ್ಯ

dvg-cycle-27.jpg
Published on

ದಾವಣಗೆರೆ : ವಾಹನಗಳ ಅತಿಯಾದ ಬಳಕೆಯಿಂದ ಪರಿಸರ ಮಾಲಿನ್ಯವಾಗುತ್ತಿದ್ದು ಅದರಿಂದ ಮುಕ್ತವಾಗಲು ಹಾಗೂ ದಾವಣಗೆರೆಯನ್ನು ಸ್ವಚ್ಛ ಮತ್ತು ಹಸಿರಾಗಿಸಲು ಪ್ರಕೃತಿಗೆ ಪೂರಕವಾದ ಸೈಕಲ್ ಬಳಸಬೇಕು ಎಂದು ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸಲಹೆ ನೀಡಿದರು.
 ನಗರದ ಕರುಣಾ ಜೀವ ಕಲ್ಯಾಣ ಟ್ರಸ್ಟ್‌ನಲ್ಲಿ ಮಂಗಳವಾರ ನಡೆದ 75ನೇ ಸೈಕಲ್ ವಿತರಣಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.
 ಸೈಕಲ್ ಎಂದರೆ ಆರೋಗ್ಯ. ಶ್ರೀಮಂತರು ಉತ್ತಮ ಸ್ವಾಸ್ಥೃಕ್ಕಾಗಿ ಸೈಕಲ್ ತುಳಿದರೆ ಬಡವರು ಹೊಟ್ಟೆ ಪಾಡಿಗಾಗಿ ಅದನ್ನು ಅವಲಂಬಿಸುತ್ತಾರೆ. ಸೈಕಲ್ ತುಳಿಯುವುದರಿಂದ ಹೃದಯ ರೋಗ ಮತ್ತು ಒತ್ತಡವನ್ನು ತಡೆದು ಸಹಜವಾಗಿ ಆರೋಗ್ಯ ವೃದ್ಧಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
 ವಿದೇಶಗಳಲ್ಲಿ ಸೈಕಲ್ ಸವಾರರಿಗೆ ಪ್ರತ್ಯೇಕ ರಸ್ತೆಗಳಿರುತ್ತವೆ. ನಮ್ಮ ದೇಶದಲ್ಲೂ ಇಂತಹ ಸೌಲಭ್ಯ ಕಲ್ಪಿಸಬೇಕು ಎಂದರು. ಟ್ರಸ್ಟ್‌ನ ಕಾರ್ಯಗಳು ಇತರೆ ಸಂಘ ಸಂಸ್ಥೆಗಳಿಗೆ ಮಾದರಿಯಾಗಿವೆ. ಬೆಣ್ಣೆ ನಗರಿಯಾದ ದಾವಣಗೆರೆ ಸೇವಾ ನಗರಿ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
 ಡಾ.ಸುದರ್ಶನ್ ಮಾತನಾಡಿ, ಅನವಶ್ಯಕವಾಗಿ ಹಣ ವ್ಯರ್ಥಗೊಳಿಸುವ ಬದಲು ಸಮಾಜದ ಸತ್ಕಾರ್ಯಗಳಿಗೆ ವಿನಿಯೋಗಿಸಿದರೆ ಬಡವರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
 ಡಾ.ಎಚ್.ಎನ್. ಮಲ್ಲಿಕಾರ್ಜುನ್ ಮಾತನಾಡಿ, ಜಾಗತಿಕ ತಾಪಮಾನ ಹೆಚ್ಚಳ ಹಾಗೂ ಪರಿಸರ ಮಾಲಿನ್ಯ ತಪ್ಪಿಸಲು ಮಕ್ಕಳಿಗೆ ಚಿಕ್ಕ ವಯಸ್ಸಿನಿಂದಲೇ ಸೈಕಲ್ ತುಳಿಯುವುದನ್ನು ರೂಢಿಗೊಳಿಸಬೇಕು. ಅದರಿಂದ ಸ್ನಾಯುಗಳು ಗಟ್ಟಿಯಾಗಿ, ರಕ್ತ ಚಲನೆ ಉತ್ತಮವಾಗುತ್ತದೆ. ಆರೋಗ್ಯ ವೃದ್ಧಿಸುತ್ತದೆ ಎಂದು ಹೇಳಿದರು.
 ಟ್ರಸ್ಟ್‌ನ ನಿರ್ದೇಶಕ ಮಧುಸೂದನ್, ಜಯ್ಯಣ್ಣ, ಕಸ್ತೂರಿ ಇದ್ದರು. ಶಿವನಕೆರೆ ಬಸವಲಿಂಗಪ್ಪ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net