

ದಾವಣಗೆರೆ : ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗಿದ್ದು, ಜಾಗೃತಿ ಮತ್ತು ಮುನ್ನೆಚ್ಚರಿಕೆ ತೆಗೆದುಕೊಳ್ಳುವುದೇ ಇದಕ್ಕೆ ಪರಿಹಾರ ಎಂದು ಬೆಂಗಳೂರಿನ ಸೈಬರ್ ಭದ್ರತೆ ಮತ್ತು ನಿರ್ವಹಣಾ ಸಲಹೆಗಾರ ಎ.ಎಸ್. ಯಶವಂತ್ ಹೇಳಿದರು.
‘ವರ್ತಮಾನ’ ಫೋರಂ ಫಾರ್ ಇಂಟಲೆಕ್ಚುಯಲ್ ಡಿಬೆಟ್ಸ್ ವತಿಯಿಂದ ನಗರದ ರೋಟರಿ ಬಾಲಭವನದಲ್ಲಿ ಶನಿವಾರ ಆಯೋಜಿಸಿದ್ದ, ‘ಸೈಬರ್ ವಂಚನೆ-ಒಳಸುಳಿವು’ ಕುರಿತ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ಏನನ್ನಾದರೂ ಹ್ಯಾಕ್ ಮಾಡಬಹುದಾಗಿದೆ. ಈ ಬಗ್ಗೆ ಮೊದಲೇ ಅರಿವಿದ್ದರೆ ಆಗಬಹುದಾದ ತೊಂದರೆಯನ್ನು ತಪ್ಪಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ದೇಶದ 10 ಊರುಗಳಿಂದ ಸೈಬರ್ ಅಪರಾಧಗಳು ಹೆಚ್ಚಾಗಿ ನಡೆಯುತ್ತಿವೆ. ಭರತ್‌ಪುರದಿಂದ ಶೇ. 18 ರಷ್ಟು ಸೈಬರ್ ಅಪರಾಧಗಳು ಆಗುತ್ತಿವೆ. ಸೈಬರ್ ವಂಚನೆಗೆ ಒಳಗಾಗುವುದರಲ್ಲಿ ಭಾರತ ಜಗತ್ತಿನಲ್ಲಿ 10ನೇ ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದರು.
ವಂಚನೆ ಪ್ರಕರಣಗಳಾದಾಗ ಕೂಡಲೇ ಪೊಲೀಸರಿಗೆ ದೂರು ನೀಡಬೇಕು. ವಿಳಂಬ ಮಾಡಬಾರದು. ತ್ವರಿತವಾಗಿ ದೂರು ನೀಡಿದರೆ ಆರ್ಥಿಕ ನಷ್ಟವನ್ನು ಸಾಧ್ಯವಾದಷ್ಟು ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು.
ಪಾಸ್‌ವರ್ಡ್ ಕೊಡುವಾಗ ಕನಿಷ್ಠ 14 ಕ್ಯಾರೆಕ್ಟರ್ ಇರಬೇಕು. ತಿಂಗಳಿಗೊಮ್ಮೆ ಅದನ್ನು ಬದಲಾಯಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ಬ್ಯಾಂಕುಗಳ ಅಧಿಕೃತ ಆ್ಯಪ್‌ಗಳನ್ನು ಮಾತ್ರ ಡೌನ್‌ಲೋಡ್ ಮಾಡಬೇಕು. ಕ್ಯೂಆರ್ ಕೋಡ್ ಸ್ಕಾೃನ್ ಮಾಡುವಾಗ ಯಾರ ಖಾತೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ರೈಲು ನಿಲ್ದಾಣಗಳಲಿ ಮೊಬೈಲ್ ಚಾರ್ಜ್ ಮಾಡುವ ಸಂದರ್ಭದಲ್ಲಿ ಎಚ್ಚರ ವಹಿಸಬೇಕು. ಅಲ್ಲಿಯೂ ವಂಚನೆ ನಡೆದಿರುವಬ ಸಾಧ್ಯತೆಯಿದೆ ಎಂದರು.
ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವಾಗ ಸಲಹೆ ನೀಡುವ ಅಧಿಕೃತ ವ್ಯಕ್ತಿಗಳನ್ನು ಸಂಪರ್ಕಿಸಬೇಕು. ನಕಲಿ ಕಾಲ್ ಸೆಂಟರ್‌ಗಳು, ನಕಲಿ ಸಾಲದ ಆ್ಯಪ್‌ಗಳ ಬಗ್ಗೆ ಹುಷಾರಾಗಿರಬೇಕು. ಅಪರಿಚಿತ ಸಂಖ್ಯೆಯಿಂದ ವಿಡಿಯೋ ಕಾಲ್ ಬಂದರೆ ಸ್ವೀಕರಿಸಬಾರದು. ನಕಲಿ ಸಿಬಿಐ ನೋಟಿಸ್‌ಗಳ ಬಗ್ಗೆಯೂ ಎಚ್ಚರದಿಂದ ಇರಬೇಕು ಎಂದು ಹೇಳಿದರು.
ಸೈಬರ್ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿ ಸುನೀಲ್ ತೇಲಿ ಮಾತನಾಡಿ, ಸೈಬರ್ ವಂಚನೆ ನಡೆದ ನಂತರದ ಒಂದು ಗಂಟೆಯನ್ನು ಗೋಲ್ಡನ್ ಅವರ್ ಎಂದು ಕರೆಯಲಾಗುತ್ತದೆ. ಅಷ್ಟರೊಳಗೆ ದೂರು ಸಲ್ಲಿಸಿದರೆ ನಷ್ಟದ ಪ್ರಮಾಣವನ್ನು ಕಡಿಮೆ ಮಾಬಹುದು ಎಂದು ತಿಳಿಸಿದರು.
ವರ್ತಮಾನ ಸಂಸ್ಥೆಯ ಸದಸ್ಯ ಎಚ್.ಎಲ್. ಶ್ರೀನಿವಾಸ ಮೂರ್ತಿ ಇದ್ದರು. ಉಪನ್ಯಾಸಕ ಎಚ್.ಎಂ. ಶ್ರೀಧರ್ ಪ್ರಾರ್ಥಿಸಿದರು. ವರ್ತಮಾನದ ಸದಸ್ಯ ಕೆ.ಎಂ. ಮೇಘರಾಜ್ ಸ್ವಾಗತಿಸಿದರು. ಗಂಗಾಧರ್ ವಂದಿಸಿದರು. ಎಸ್. ಪ್ರಸಾದ್ ಬಂಗೇರ ನಿರೂಪಿಸಿದರು.
...
(ಬಾಕ್ಸ್)
ಡಿಜಿಟಲ್ ಅರೆಸ್ಟ್
ನಕಲಿ ಪೊಲೀಸ್ ಅಧಿಕಾರಿಗಳು ಮೊಬೈಲ್‌ನಲ್ಲಿ ಮಾತನಾಡಿ, ‘ನಿಮ್ಮ ಮೇಲೆ ಆರೋಪವಿದೆ. ಕೇಸ್ ಆಗಬಾರದೆಂದರೆ ಹಣ ನೀಡಬೇಕು’ ಎಂದು ಹೇಳಿ ಸಾರ್ವಜನಿಕರನ್ನು ವಂಚಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಎ.ಎಸ್. ಯಶವಂತ್ ಹೇಳಿದರು.
ನಿಮ್ಮ ಹೆಸರಿನಲ್ಲಿ ಅಪಾಯಕಾರಿ ಪಾರ್ಸಲ್ ಬಂದಿದೆ, ಅಥವಾ ಇನ್ನೇನೋ ಆರೋಪವಿದೆ ಎಂದು ಹೇಳಿ ಹೆದರಿಸಲಾಗುತ್ತದೆ. ಧ್ವನಿಮುದ್ರಿತ ಮೆಸೇಜ್‌ಗಳು ಬರುತ್ತವೆ. ಅನುಮಾನಾಸ್ಪದ ದೂರವಾಣಿ ಸಂಖ್ಯೆ ಇದ್ದರೆ ಅದನ್ನು ಬ್ಲಾಕ್ ಮಾಡಬೇಕು ಎಂದು ತಿಳಿಸಿದರು.
ದೂರವಾಣಿ ಕರೆ ಮಾಡಿ ‘ನಿಮ್ಮ ಕುಟುಂಬದವರನ್ನು ಬಂಧಿಸಿದ್ದೇವೆ’ ಎಂದು ನಂಬಿಸುವ ಪ್ರಯತ್ನಗಳು ನಡೆಯುತ್ತವೆ. ಅದಕ್ಕೆ ಪ್ರತಿಕ್ರಿಯೆ ನೀಡದೇ, ನೇರವಾಗಿ ಸಂಬಂಧಿಸಿದ ಪೊಲೀಸ್ ಠಾಣೆಗೆ ಭೇಟಿ ನೀಡಬೇಕು’ ಎಂದು ಹೇಳಿದರು.
...
* ಸಾರ್ವಜನಿಕರು ಸೈಬರ್ ವಂಚನೆಗೆ ಒಳಗಾದರೆ 1930 ಸಂಖ್ಯೆಯನ್ನು ಸಂಪರ್ಕಿಸಬೇಕು
...