

ದಾವಣಗೆರೆ : ಪ್ರಥಮ ಸ್ವಾತಂತ್ರೃ ಸಂಗ್ರಾಮದಿಂದ ಹಿಡಿದು ಬ್ರಿಟಿಷರು ಭಾರತದಿಂದ ಕಾಲ್ತೆಗೆಯುವ ವರೆಗೆ ನಮ್ಮ ಹಿರಿಯರು ನಡೆಸಿದ ಹೋರಾಟ, ತ್ಯಾಗ, ಬಲಿದಾನದ ಕತೆಯನ್ನು ನಗರದ ಸಿದ್ಧಗಂಗಾ ಶಾಲೆಯ ಮಕ್ಕಳು ಮನೋಜ್ಞವಾಗಿ ಕಟ್ಟಿಕೊಟ್ಟರು.
ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ, ಜಿಲ್ಲಾಡಳಿತದಿಂದ ಆಯೋಜಿಸಿದ್ದ ಸ್ವಾತಂತ್ರೊೃೀತ್ಸವ ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಶಾಲೆಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರದರ್ಶನ ‘ಸಂಕೋಲೆಯಿಂದ ಸ್ವಾತಂತ್ರೃದೆಡೆಗೆ’ ಹೈಲೈಟ್ ಆಗಿತ್ತು.
ಶಾಲೆಯ 2 ಸಾವಿರ ಮಕ್ಕಳು ವೈವಿಧ್ಯಮಯ ಪರಿಕರಗಳನ್ನು ಉಪಯೋಗಿಸಿ ಚಳವಳಿಯ ವಿವಿಧ ಮಜಲುಗಳನ್ನು ರೂಪಕದಲ್ಲಿ ಪ್ರಸ್ತುತಪಡಿಸಿದರು. ಕಪ್ಪ ಕೇಳಲು ಬಂದ ಬ್ರಟಿಷ್ ಅಧಿಕಾರಿಗೆ ಕೆಚ್ಚೆದೆಯ ಉತ್ತರ ನೀಡಿದ ಕಿತ್ತೂರು ರಾಣಿ ಚನ್ನಮ್ಮನ ವೀರಗಾಥೆ, ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಶೌರ್ಯ, ದಾಂಡಿ ಸತ್ಯಾಗ್ರಹ, ಕ್ವಿಟ್ ಇಂಡಿಯಾ, ಸೈಮನ್ ಗೋಬ್ಯಾಕ್ ಹೋರಾಟಗಳ ದೃಶ್ಯವನ್ನು ಒಂದೊಂದಾಗಿ ಪ್ರೇಕ್ಷಕರ ಮುಂದೆ ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿದರು.
ಲಲಿತಾ ಇಂಟರ್‌ನ್ಯಾಷನಲ್ ಶಾಲೆಯ ಮಕ್ಕಳು ‘ವಂದೇ ಮಾತರಂ’ ನೃತ್ಯ ರೂಪಕದಲ್ಲಿ ಯೋಧರ ಸಾಹಸಗಾಥೆಯನ್ನು ಹೇಳಿದರು. ವಿನೋಬನಗರದ ಸೇಂಟ್ ಮೇರೀಸ್ ಶಾಲೆಯ ಮಕ್ಕಳು ‘ಚಕ್‌ದೇ ಇಂಡಿಯಾ’ ಹಾಡಿಗೆ ಹೆಜ್ಜೆ ಹಾಕಿದರು. ನಿಂಚನ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ‘ಗಾಂಧಿ, ಗೋಖಲೆ, ಶಾಂತಿ ಇಂಡಿಯಾ’, ಜೈನ್ ವಿದ್ಯಾಲಯದ ಮಕ್ಕಳು ‘ಜಾಗೋ ಹಿಂದುಸ್ತಾನ್’ ಕಾರ್ಯಕ್ರಮವನ್ನು ನಡೆಸಿಕೊಟ್ಟರು.