

ದಾವಣಗೆರೆ : ಮೊಬೈಲ್ ವ್ಯಸನದಿಂದ ಮುಕ್ತರನ್ನಾಗಿಸಲು ಮಕ್ಕಳಲ್ಲಿ ಸಾಂಸ್ಕೃತಿಕ ಪ್ರಜ್ಞೆ ಮೂಡಿಸುವ ಅಗತ್ಯ ತುಂಬಾ ಹೆಚ್ಚಿದೆ ಎಂದು ಉಪವಿಭಾಗಾಧಿಕಾರಿ ಸಂತೋಷ್‌ಕುಮಾರ್ ಹೇಳಿದರು. ಸಾರ್ವಜನಿಕ ವಾಲ್ಮೀಕಿ ಜಯಂತ್ಯುತ್ಸವ ಸಮಿತಿ ಹಾಗೂ ಮಹರ್ಷಿ ವಾಲ್ಮೀಕಿ ಪ್ರತಿಷ್ಠಾನದ ಸಹಯೋಗದಲ್ಲಿ ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ಯುವಜನೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮೊದಲಾದ ಸಾಮಾಜಿಕ ಜಾಲತಾಣ ಮಕ್ಕಳನ್ನು ಆಕರ್ಷಿಸಿದ್ದು, ಬಹುತೇಕರು ಮೊಬೈಲ್ನಲ್ಲಿ ಕಾಲಹರಣ ಮಾಡುತ್ತಿದ್ದು, ಇದರಿಂದ ಹೊರತರಲು ಮಕ್ಕಳನ್ನು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಬೇಕು ಎಂದು ಹೇಳಿದರು. ಸಮಾಜದಲ್ಲಿ ಇನ್ನೂ ಹಲವು ಸಮುದಾಯಗಳು ಹಿಂದುಳಿದಿವೆ. ಆರ್ಥಿಕ ಹಾಗೂ ಸಾಮಾಜಿಕ ಸಮಾನತೆ ಪಡೆಯಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು. ಅಂಬೇಡ್ಕರ್ ಆಶಯದಂತೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ತಳಸಮುದಾಯಗಳು ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಕಿವಿಮಾತು ಹೇಳಿದರು. ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ ಮಾತನಾಡಿ, ವಾಲ್ಮೀಕಿ ಸಮುದಾಯದಲ್ಲಿ ಸಾಂಸ್ಕೃತಿಕ ಪ್ರತಿಭೆಗಳ ಸಂಖ್ಯೆ ಹೆಚ್ಚು. ಕಲೆ, ಸಂಸ್ಕೃತಿ ಜತೆಗೆ ಶಿಕ್ಷಣಕ್ಕೂ ಒತ್ತು ನೀಡಬೇಕು. ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಮುಂದೆ ಬರಲು ಶಿಕ್ಷಣವೊಂದೇ ದಾರಿ ಎಂದು ಸಲಹೆ ನೀಡಿದರು. ವಾಲ್ಮೀಕಿ ಸಮಾಜದ ಅಧ್ಯಕ್ಷ ಹುಚ್ಚವನಹಳ್ಳಿ ಮಂಜುನಾಥ್, ಎಪಿಎಂಸಿ ಅಧ್ಯಕ್ಷ ಎಸ್.ಕೆ. ಚಂದ್ರಶೇಖರಪ್ಪ, ಮಹಾನಗರ ಪಾಲಿಕೆ ಸದಸ್ಯ ಆರ್. ಶಿವಾನಂದ, ತರಕಾರಿ ದಲ್ಲಾಳಿಗಳ ಸಂಘದ ಅಧ್ಯಕ್ಷ ಎಸ್.ಎನ್. ತಿಪ್ಪೇಸ್ವಾಮಿ, ಮಾಧವಿ, ವಾಣಿ ಕೇಶವನ್, ಶ್ರೇಯಾ ಶ್ರೀನಿವಾಸ್, ಯುವ ಉದ್ಯಮಿ ಜಿ.ಎಸ್. ಶ್ಯಾಮ್, ಜ್ಞಾನೇಶ್ವರ ತ್ಯಾವಣಿಗಿ, ಕಾಂಗ್ರೆಸ್ ಮುಖಂಡ ತೆಂಬಣ್ಣ, ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ. ಗೋವಿಂದರಾಜ್ ಇದ್ದರು.