

ರಮೇಶ ಜಹಗೀರದಾರ್ ದಾವಣಗೆರೆ : ಕೈತುಂಬ ಕಾಸು ತರುವ ವಾಣಿಜ್ಯ ಬೆಳೆಗಳತ್ತ ಬಹಳಷ್ಟು ರೈತರು ಆಕರ್ಷಿತರಾಗುತ್ತಿರುವ ಹೊತ್ತಿನಲ್ಲಿ ಆಹಾರ ಧಾನ್ಯಗಳ ಭದ್ರತೆಯ ಅನಿವಾರ್ಯತೆ ಮನಗಂಡು ಕೃಷಿ ಅಧಿಕಾರಿಗಳು ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ತೊಗರಿ ಬೆಳೆಯಲು ನೀಡಿದ ಪ್ರೋತ್ಸಾಹ ಫಲ ನೀಡಿದೆ. ಹಿಂದಿನ ವರ್ಷಗಳಲ್ಲಿ ಕಂಡಿಲ್ಲದಷ್ಟು ವಿಸ್ತೀರ್ಣದಲ್ಲಿ ತೊಗರಿ ಬೆಳೆಯು ನಳ ನಳಿಸುತ್ತಿದ್ದು ಈ ಬಾರಿ ಬಂಪರ್ ಇಳುವರಿಯನ್ನು ನಿರೀಕ್ಷಿಸಲಾಗಿದೆ. ರಾಷ್ಟ್ರೀಯ ಆಹಾರ ಮತ್ತು ಪೌಷ್ಟಿಕ ಭದ್ರತಾ ಯೋಜನೆಯಡಿ 2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮೆಕ್ಕೆಜೋಳ, ಹತ್ತಿ, ಅವರೆ, ಅಡಕೆ ಬೆಳೆಗಳಲ್ಲಿ ತೊಗರಿಯನ್ನು ಅಂತರ (ಅಕ್ಕಡಿ) ಬೆಳೆಯಾಗಿ ಮತ್ತು ಏಕ ಬೆಳೆಯಾಗಿ ಬೆಳೆಯಲು ರೈತರಿಗೆ ಆಂದೋಲನ ಮಾದರಿಯಲ್ಲಿ ತರಬೇತಿ ಹಾಗೂ ಪ್ರಚಾರ ಕೈಗೊಳ್ಳಲಾಗಿತ್ತು. ಆಯ್ದ ಆಸಕ್ತ ರೈತರಿಗೆ ಇಲಾಖೆಯಿಂದ ಬಿಆರ್‌ಜಿ-5 ತಳಿಯ ಬಿತ್ತನೆ ಬೀಜವನ್ನು ವಿತರಿಸಿ, ಪಾಕೆಟ್‌ಗಳಲ್ಲಿ ಸಸಿಮಡಿ ತಯಾರಿಸಿ, ಮಳೆ ಬಂದ ನಂತರ ರೈತರು ನಾಟಿ ಮಾಡಿಕೊಂಡರು. ಬೀಜವನ್ನು ಊರುವುದರ ಮೂಲಕ ತೊಗರಿಯನ್ನು ಬೆಳೆದಿದ್ದಾರೆ. ದಾವಣಗೆರೆ ತಾಲೂಕಿನ ಈಚಘಟ್ಟ ಗ್ರಾಮದಲ್ಲಿ ಪ್ರಭು ಎಂಬ ರೈತ 19 ಎಕರೆಯಷ್ಟು ತೊಗರಿಯನ್ನು ಏಕ ಬೆಳೆಯಾಗಿ ಬೆಳೆದಿದ್ದಾರೆ. ನೇರ‌್ಲಿಗೆ ಗ್ರಾಮದಲ್ಲಿ ನಿಂಗಪ್ಪ ಎಂಬ ರೈತ ಚಿಕ್ಕ ಅಡಕೆ ಬೆಳೆಯಲ್ಲಿ 6 ಎಕರೆ ತೊಗರಿಯನ್ನು ಅಂತರ ಬೆಳೆಯಾಗಿ ಬೆಳೆದಿದ್ದಾರೆ. ಕೆಲವು ವರ್ಷಗಳ ಹಿಂದೆ ದಾವಣಗೆರೆ ತಾಲೂಕಿನಲ್ಲಿ 350 ರಿಂದ 450 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಇಳುವರಿ ಬರುತ್ತಿತ್ತು. ಇಲಾಖೆಯು ನೀಡಿದ ಉತ್ತೇಜನದ ಪರಿಣಾಮವಾಗಿ ಈ ವರ್ಷ 3843 ಹೆಕ್ಟೇರ್‌ಗೆ ಅದು ವಿಸ್ತರಣೆಯಾಗಿದೆ. ... (ಬಾಕ್ಸ್) ಗುರಿ ಮೀರಿದ ವಿಸ್ತೀರ್ಣ ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 12,570 ಹೆಕ್ಟೇರ್‌ನಲ್ಲಿ ತೊಗರಿ ಬೆಳೆಯುವ ಗುರಿ ಇತ್ತು. 13,773 ಹೆಕ್ಟೇರ್‌ನಲ್ಲಿ ಬೆಳೆಯುವ ಮೂಲಕ ಶೇ. 110 ರಷ್ಟು ಸಾಧನೆಯಾಗಿದೆ. ದಾವಣಗೆರೆ ತಾಲೂಕಿನಲ್ಲಿ 3843 ಹೆಕ್ಟೇರ್, ಹರಿಹರ 409 ಹೆಕ್ಟೇರ್, ಜಗಳೂರು 3964 ಹೆಕ್ಟೇರ್, ಹೊನ್ನಾಳಿ 1957 ಹೆಕ್ಟೇರ್, ಚನ್ನಗಿರಿ 2919 ಹೆಕ್ಟೇರ್, ನ್ಯಾಮತಿ ತಾಲೂಕಿನಲ್ಲಿ 681 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆ ಆವರಿಸಿದೆ.