

ಸಾಸ್ವೆಹಳ್ಳಿ: ತುಂಗಭದ್ರಾ ನದಿಯಲ್ಲಿ ಇದೀಗ ನೀರಿನ ಹರಿವು ಕಡಿಮೆಯಾಗಿದ್ದು, ಹೊನ್ನಾಳಿ-ನ್ಯಾಮತಿ ತಾಲೂಕುಗಳ ನಡುವೆ ಹೊಳೆಯಲ್ಲಿ ಮೊಸಳೆಗಳ ಸಂಚಾರ ಗೋಚರಿಸಿದ್ದು ನದಿ ಪಾತ್ರದ ಗ್ರಾಮಗಳ ಜನರನ್ನು ಆತಂಕಕ್ಕೆ ಈಡು ಮಾಡಿದೆ. ಚೀಲೂರು, ಕೋಟೆಹಾಳ್ ಬಾಗೇವಾಡಿ, ಹುರಳೆಹಳ್ಳಿ, ಹೊಸಹಳ್ಳಿ ಗ್ರಾಮಗಳ ಸಮೀಪ ನದಿಯಲ್ಲಿ ಕಳೆದ ಮೂರು ದಿನಗಳಿಂದ ದೊಡ್ಡ ಗಾತ್ರದ 10 ರಿಂದ 12 ಅಡಿ ಉದ್ದದ ಮೊಸಳೆ ಕಾಣಿಸಿಕೊಂಡಿದೆ. ಆದರಿಂದ ಯಾರೂ ತೊಂದರೆಗೆ ಒಳಗಾಗಿಲ್ಲ. ನದಿ ಪಾತ್ರದಲ್ಲಿ ಬಟ್ಟೆ ತೊಳೆಯಲು, ಸ್ನಾನ ಮಾಡಲು, ಜಾನುವಾರು ಮೇಯಿಸಲು ಹೋಗಲು ಗ್ರಾಮಸ್ಥರು ಹೆದರುತ್ತಿದ್ದಾರೆ. ಕಳೆದ ವರ್ಷ ಇದೇ ಸಮಯದಲ್ಲಿ ರಾಂಪುರ, ಹೊಟ್ಯಾಪುರ, ಗೋವಿನಕೋವಿ ಸಮೀಪ ಮೊಸಳೆ ಗೋಚರಿಸಿತ್ತು. ಸಾಸ್ವೆಹಳ್ಳಿ ಸಮೀಪ ನದಿ ದಡದಲ್ಲಿ ಮೊಸಳೆ ಮರಿಗಳು ಪತ್ತೆಯಾಗಿದ್ದವು. ಅವುಗಳನ್ನು ಅರಣ್ಯ ಇಲಾಖೆಯವರು ಬೇರೆಡೆ ತೆಗೆದುಕೊಂಡು ಹೋಗಿ ಬಿಟ್ಟಿದ್ದರು. ಸಾಸ್ವೆಹಳ್ಳಿ ಸಮೀಪ ತುಂಗಭದ್ರಾ ನದಿಗೆ ಹೊಂದಿಕೊಂಡಂತಿರುವ ಬೊಮ್ಮನಹಳ್ಳಿ ಹಳ್ಳದ ಚೆಕ್ ಡ್ಯಾಂಗಳಲ್ಲೂ ಮೊಸಳೆಗಳು ಇರುವುದಾಗಿ ಸ್ಥಳೀಯ ರೈತರು ತಿಳಿಸಿದ್ದಾರೆ.