

ದಾವಣಗೆರೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ ಆರೋಪಿಯನ್ನು ಇಲ್ಲಿನ ಸಿ.ಇ.ಎನ್ ಅಪರಾಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ದಾವಣಗೆರೆಯ ಅಮ್ಜದ್ ಬಂಧಿತ ವ್ಯಕ್ತಿ. ಜಿಲ್ಲೆಯಲ್ಲಿ ಔಷಧ ಅಂಗಡಿ ನಡೆಸುವ ಈ ಆರೋಪಿ, ಬಾಲಕಿಯೊಬ್ಬಳನ್ನು ಯಾವುದೋ ಮನೆಗೆ ಕರೆದುಕೊಂಡು ಹೋಗಿ, ಅತ್ಯಾಚಾರ ಮಾಡಿದ್ದಲ್ಲದೆ ವಿಡಿಯೋ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದ ವಿಡಿಯೋವನ್ನು ಯಾರೋ ಚನ್ನಗಿರಿ ಪೊಲೀಸ್ ಠಾಣೆಯ ಎ.ಎಸ್.ಐ ಎಚ್.ಎನ್. ಶಶಿಧರ್ ಅವರ ಮೊಬೈಲ್‌ಗೆ ಕಳಿಸಿದ್ದಾರೆ. ಆ ಮಾಹಿತಿ ಆಧರಿಸಿ ಶಶಿಧರ್ ದಾವಣಗೆರೆಯ ಸಿ.ಇ.ಎನ್ ಅಪರಾಧ ಠಾಣೆಗೆ ದೂರು ಸಲ್ಲಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು. ಈ ಬಗ್ಗೆ ಪೋಕ್ಸೋ ಹಾಗೂ ಇನ್ನಿತರ ಕಾಯ್ದೆಗಳಡಿ ಪ್ರಕರಣ ದಾಖಲಿಸಲಾಯಿತು. ಎಸ್ಪಿ ಉಮಾ ಪ್ರಶಾಂತ್, ಸಿ.ಇ.ಎನ್ ಅಪರಾಧ ಠಾಣೆಯ ಡಿವೈಎಸ್ಪಿ ಪದ್ಮಶ್ರೀ ಗುಂಜೀಕರ್ ಮಾರ್ಗದರ್ಶನದಲ್ಲಿ ರಚಿಸಲಾಗಿದ್ದ ಠಾಣೆಯ ಸಿಬ್ಬಂದಿ ಪ್ರಕಾಶ್, ಗೋವಿಂದರಾಜು ಅವರನ್ನೊಳಗೊಂಡ ತಂಡವು ಆರೋಪಿಯನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿತು. ಆರೋಪಿ ಈಗ ನ್ಯಾಯಾಂಗ ಬಂಧನಲ್ಲಿದ್ದಾನೆ.