

ಚನ್ನಗಿರಿ: ಬಂಗಾರದ ಸರ ಕೊಡಲೊಪ್ಪದ ವ್ಯಕ್ತಿಗೆ ಮಂಗಳವಾರ ಚಾಕುವಿನಿಂದ ಇರಿದು ಗಾಯಗೊಳಿಸಿದ ಆರೋಪಿಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದು, ಆಸ್ಪತ್ರೆ ಸೇರುವಂತೆ ಮಾಡಿದ್ದಾರೆ. ತಾಲೂಕಿನ ಬಿಲ್ಲಹಳ್ಳಿ ಗ್ರಾಮದ ನಾಗರಾಜ್ ತಿಮ್ಲಾಪುರದ ತನ್ನ ಅಡಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಗಾಣದಕಟ್ಟೆಯ ಸಚಿನ್ ಎಂಬಾತ ಚಾಕು ತೋರಿಸಿ, ಕೊರಳಲ್ಲಿದ್ದ ಬಂಗಾರದ ಸರ ಕೊಡುವಂತೆ ಹೆದರಿಸಿದ್ದಾನೆ. ಕೊಡಲು ಒಪ್ಪದಿದ್ದಾಗ ಇಬ್ಬರ ನಡುವೆ ವಾಗ್ವಾದ, ನೂಕಾಟ ನಡೆದಿದೆ. ಸಿಟ್ಟಿಗೆದ್ದ ಆರೋಪಿ, ನಾಗರಾಜ್ ಹೊಟ್ಟೆಗೆ ಚಾಕುವಿನಿಂದ ಚುಚ್ಚಿದ್ದಾನೆ. ನಾಗರಾಜ್ ಜೋರಾಗಿ ಕೂಗಿಕೊಂಡಾಗ ಅಕ್ಕಪಕ್ಕದ ಹೊಲಗಳಲ್ಲಿದ್ದ ರೈತರು ಧಾವಿಸಿ ಬಂದು ಆರೋಪಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ, ಇಬ್ಬರನ್ನೂ ಸಾರ್ವಜನಿಕರೇ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ನಾಗರಾಜನನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತಂಕದಲ್ಲಿ ಜನತೆ: ಮನೆ, ಅಂಗಡಿಗಳಲ್ಲಷ್ಟೇ ಕಳ್ಳತನ, ದರೋಡೆ ಪ್ರಕರಣಗಳು ಹೊಲಗಳಿಗೂ ವಿಸ್ತರಿಸಿರುವುದರಿಂದ ಆತಂಕ ಶುರುವಾಗಿದೆ. ಮೊದಲೇ ಹೊಲಗಳಲ್ಲಿ ಕೂಲಿಯಾಳುಗಳ ಕೊರತೆ ಇದೆ. ಹೀಗಾದರೆ ಹೊಲಗಳಲ್ಲಿ ಒಬ್ಬಂಟಿಯಾಗಿ ಕೆಲಸ ಮಾಡುವುದು ಹೇಗೆ ಎಂಬ ಪ್ರಶ್ನೆ ಎದುರಾಗಿದೆ. ಆದ್ದರಿಂದ ಪೊಲೀಸ್ ಇಲಾಖೆ ಸೂಕ್ತ ಕ್ರಮಕೈಗೊಂಡು ಜನರ ಆತಂಕ ದೂರಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.