ಸಂತೇಬೆನ್ನೂರಿನ ಗುತ್ತಿಗೆದಾರ ಆತ್ಮಹತ್ಯೆ

Crime_3.jpg
Published on

ದಾವಣಗೆರೆ : ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರನ್ ಆತ್ಮಹತ್ಯೆ ಪ್ರಕರಣ ಬಿರುಗಾಳಿ ಎಬ್ಬಿಸಿರುವ ಬೆನ್ನಲ್ಲೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸಂತೇಬೆನ್ನೂರಿನ ಗುತ್ತಿಗೆದಾರ ಪಿ.ಎಸ್. ಗೌಡರ್ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದ್ದು ಈ ಪ್ರಕರಣವು ಪ್ರತಿಪಕ್ಷಗಳ ಕೈಗೆ ಮತ್ತೊಂದು ಅಸ್ತ್ರ ನೀಡಿದಂತಾಗಿದೆ.
 ಪಿ.ಎಸ್. ಗೌಡರ್ (50) ಮೇ 26 ರಂದು ಮನೆಯಲ್ಲಿನ ಫ್ಯಾನ್‌ಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದು ಡೆತ್‌ನೋಟ್ ಬರೆದಿಟ್ಟಿದ್ದಾರೆ. ಅದರಲ್ಲಿ ಅವರು ಕೆಆರ್‌ಐಡಿಎಲ್ ಕಾಮಗಾರಿ ನಡೆಸಿದ ಹಣ ಬಂದಿಲ್ಲ ಎಂಬುದು ಸೇರಿ ಇನ್ನಿತರ ಕಾರಣಗಳನ್ನೂ ಪ್ರಸ್ತಾಪಿಸಿದ್ದಾರೆ. ಇದನ್ನು ಆಧರಿಸಿ ಗೌಡರ್ ಪತ್ನಿ ವಸಂತಕುಮಾರಿ ಸಂತೇಬೆನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೆಆರ್‌ಐಡಿಎಲ್ (ಲ್ಯಾಂಡ್ ಆರ್ಮಿ) ಸಂಸ್ಥೆ ಸೇರಿ 5 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
 ‘ನನ್ನ ಗಂಡ ಕೆಆರ್‌ಐಡಿಎಲ್ ಅಧೀನದಲ್ಲಿ ಸಂತೇಬೆನ್ನೂರಿನ ಕೃಷಿ ಇಲಾಖೆಯ ಆವರಣದಲ್ಲಿ ಕಾಮಗಾರಿ ನಡೆಸಿದ್ದರು. ಇದರ ಹಣ ಬಂದಿರಲಿಲ್ಲ. ಈ ಬಗ್ಗೆ ನನ್ನ ಗಂಡ ಮಾನಸಿಕವಾಗಿ ನೊಂದಿದ್ದರು’ ಎಂದು ವಸಂತಕುಮಾರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಕಾಮಗಾರಿ ನಡೆಸಿರುವ ಗುತ್ತಿಗೆದಾರರಿಗೆ ಸಕಾಲದಲ್ಲಿ ಹಣ ಪಾವತಿಯಾಗುತ್ತಿಲ್ಲ ಎಂದು ಗುತ್ತಿಗೆದಾರರ ಸಂಘವು ಇತ್ತೀಚೆಗಷ್ಟೆ ಆರೋಪಿಸಿತ್ತು.
 ನಾನು ಮತ್ತು ನನ್ನ ಮಗಳು ಚಿತ್ರದುರ್ಗಕ್ಕೆ ಸಂಬಂಧಿಕರ ಮನೆಯಲ್ಲಿ ಸೀಮಂತ ಕಾರ್ಯಕ್ರಮಕ್ಕೆ ಹೋಗಿದ್ದಾಗ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಸಂತಕುಮಾರಿ ದೂರಿನಲ್ಲಿ ತಿಳಿಸಿದ್ದಾರೆ.
 ...
 ಕೌಟುಂಬಿಕ ವ್ಯಾಜ್ಯವೂ ಇತ್ತು
 ಗೌಡರ್ ಆತ್ಮಹತ್ಯೆಗೆ ಕೌಟುಂಬಿಕ ವ್ಯಾಜ್ಯವೂ ಕಾರಣ ಎಂಬ ಅಂಶ ಡೆತ್ ನೋಟ್‌ನಲ್ಲಿದೆ. ಗುತ್ತಿಗೆದಾರ ಪಿ.ಎಸ್. ಗೌಡರ್ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿದ್ದಲಿಂಗಪ್ಪ ಅವರ ಪುತ್ರ. ಆಸ್ತಿ ಹಂಚಿಕೆ ವಿಚಾರದಲ್ಲಿ ಸಹೋದರರ ನಡುವೆ ಮನಸ್ತಾಪವಿತ್ತು. ಒಮ್ಮೆ ದೈಹಿಕ ಹಲ್ಲೆಯೂ ನಡೆದಿತ್ತು, ನಂತರ ರಾಜಿ ಮಾಡಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
 ಗೌಡರ್ ಅಣ್ಣ ಜಿ.ಎಸ್. ನಾಗರಾಜ್, ತಮ್ಮ ಗೌಡರ ಶ್ರೀನಿವಾಸ್ ಅವರೊಂದಿಗೆ ಆಸ್ತಿ ಹಂಚಿಕೆ ವಿಚಾರವಾಗಿ ಮನಸ್ತಾಪವಿತ್ತು. ಹಲವು ಬಾರಿ ಪಂಚಾಯಿತಿ ಮಾಡಲಾಗಿತ್ತು. ಗೌಡರ ಶ್ರೀನಿವಾಸ್ ಅವರ ಪತ್ನಿ ಇಂದುಮತಿ ಮತ್ತು ಅವರ ತಂದೆ ಚಿತ್ರಶೇಖರಪ್ಪ ಅವರು ನಮಗೆ ಮಾನಸಿಕ ಹಿಂಸೆ ನೀಡಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ.
 ....
 ಡೆತ್ ನೋಟ್‌ನಲ್ಲೇನಿದೆ?
 ಕೆಆರ್‌ಐಡಿಎಲ್ ಅಡಿಯಲ್ಲಿ ಒಂದು ಕಾಮಗಾರಿ ನಿರ್ವಹಿಸಿದ್ದು (ಕೃಷಿ ಇಲಾಖೆ ಆವರಣ, ಸಂತೇಬೆನ್ನೂರು) ಇದು 2023-24ನೇ ಸಾಲಿನಲ್ಲಿ ಪೂರ್ಣಗೊಂಡಿದೆ. ಆದರೆ ಇದುವರೆಗೂ ನನಗೆ ಕಾಮಗಾರಿ ಮೊತ್ತವನ್ನು ನೀಡದೆ ಮಾನಸಿಕವಾಗಿ ಹಿಂಸೆ ನೀಡಿರುತ್ತಾರೆ. ಹಾಗೂ ಈ ಸಂಸ್ಥೆಯಿಂದ ನನ್ನ ಕುಟುಂಬಕ್ಕೆ ದೊಡ್ಡ ಮೊತ್ತದ ಪರಿಹಾರ ಒದಗಿಸಿಕೊಡಬೇಕು ಎಂದು ಡೆತ್‌ನೋಟ್‌ನಲ್ಲಿ ಕೋರಿರುವುದಾಗಿ ತಿಳಿದು ಬಂದಿದೆ.
 ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net