

ದಾವಣಗೆರೆ : ಸೈಬರ್ ವಂಚನೆಯ ಅಂತಾರಾಜ್ಯ ಆರೋಪಿಯನ್ನು ದಾವಣಗೆರೆ ಜಿಲ್ಲೆಯ ಸೈಬರ್ ಅಪರಾಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಹಾಸನ ಜಿಲ್ಲೆ ಬೇಲೂರು ಟೌನ್‌ನ ಸೈಯದ್ ಅರ್ಫಾತ್ ಬಂಧಿತ ಆರೋಪಿ. ಈತನು ದಾವಣಗೆರೆಯ ಎಚ್.ಎಚ್. ಪ್ರಮೋದ್ ಎಂಬುವರಿಗೆ 52.60 ಲಕ್ಷ ರೂ.ಗಳನ್ನು ಆನ್‌ಲೈನ್‌ನಲ್ಲಿ ವಂಚಿಸಿದ ಬಗ್ಗೆ ದೂರು ದಾಖಲಾಗಿತ್ತು. ಆರೋಪಿಯ ಪತ್ತೆಗಾಗಿ ಸೈಬರ್ ಅಪರಾಧ ಪೊಲೀಸ್ ಠಾಣೆಯ ಡಿವೈಎಸ್ಪಿ ಬಂಕಾಳಿ ನಾಗಪ್ಪ ನೇತೃತ್ವದಲ್ಲಿ ಸಿಬ್ಬಂದಿ ಅಶೋಕ, ಸುರೇಶ್, ಮುತ್ತುರಾಜ್, ನಿಜಲಿಂಗಪ್ಪ ಅವರ ತಂಡ ಕಾರ್ಯಾಚರಣೆ ನಡೆಸಿತ್ತು. ಆರೋಪಿಯಿಂದ 1 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಪತ್ತೆ ಕಾರ್ಯ ಮತ್ತು ತನಿಖೆ ಮುಂದುವರಿದಿದೆ. ಆರೋಪಿತರ ಚಾಲ್ತಿ ಖಾತೆಯಲ್ಲಿ ಜುಲೈ 27 ರಿಂದ ಆ. 19 ರ ವರೆಗೆ ಸುಮಾರು 150 ಕೋಟಿ ಆನ್‌ಲೈನ್ ವಂಚನೆ ಮೊತ್ತ ಡಿಪಾಸಿಟ್ ಆಗಿದ್ದು, ಆರೋಪಿಗಳು 132 ಕೋಟಿ ಹಣ ವಿತ್‌ಡ್ರಾ ಮಾಡಿದ್ದಾರೆ. ಆ ಖಾತೆಯಲ್ಲಿ 18 ಕೋಟಿ ಫ್ರೀಜ್ ಮಾಡಿಸಿದ್ದು, 52.60 ಲಕ್ಷ ರೂ.ಗಳನ್ನು ನ್ಯಾಯಾಲಯದ ಆದೇಶದಂತೆ ಪ್ರಮೋದ್ ಅವರಿಗೆ ಮರಳಿಸಲಾಗಿದೆ.