ಹಂತಕ ಬಳಸಿದ ಚಾಕು ಹುಡುಕಾಟದಲ್ಲಿ ಪೊಲೀಸರು

acused_20240518234551819.jpg
Published on

 ರಮೇಶ ಜಹಗೀರದಾರ್ ದಾವಣಗೆರೆ
 ಆರೋಪಿ ವಿಶ್ವನಾಥ ಅಲಿಯಾಸ್ ಗಿರೀಶ ಸಾವಂತ ಹುಬ್ಬಳ್ಳಿಯ ಯುವತಿ ಅಂಜಲಿ ಹತ್ಯೆಗೆ ಉಪಯೋಗಿಸಿದ ಚಾಕುವನ್ನೇ ವಿಶ್ವಮಾನವ ಎಕ್ಸ್‌ಪ್ರೆಸ್ ರೈಲಿನಲ್ಲಿ ಮಹಿಳೆಗೆ ಇರಿಯಲು ಬಳಸಿದನೆ?.
 ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಈ ಅನುಮಾನ ವ್ಯಕ್ತಪಡಿಸಿದ್ದಾರೆ. ಇದೇ ಎಳೆಯ ಜಾಡು ಹಿಡಿದು ಮಾಹಿತಿ ಕಲೆಹಾಕುತ್ತಿದ್ದಾರೆ. ಹಂತಕ ಬಳಸಿದ ಚಾಕುವಿನ ಶೋಧ ಕಾರ್ಯ ನಡೆದಿದೆ.
 ಗುರುವಾರ ರೈಲಿನಲ್ಲಿ ಲಕ್ಷ್ಮೀ ಎಂಬ ಮಹಿಳೆಗೆ ಚಾಕುವಿನಿಂದ ಇರಿದಿದ್ದ ಆರೋಪಿ ಚಲಿಸುವ ರೈಲಿನಿಂದ ಜಿಗಿದು ತೀವ್ರವಾಗಿ ಗಾಯಗೊಂಡಿದ್ದ. ನಂತರ ಆತನನ್ನು ಆಂಬುಲೆನ್ಸ್‌ನಲ್ಲಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಆತನ ಬಳಿಯಿದ್ದ ಚಾಕು ಏನಾಯಿತು? ಯಾವ ಜಾಗದಲ್ಲಿ ಬಿದ್ದಿದೆ ಎಂದು ಪತ್ತೆಹಚ್ಚಬೇಕಿದೆ. ಈ ಪ್ರಕರಣದಲ್ಲಿ ಅದು ಪ್ರಮುಖ ಸಾಕ್ಷಿಯಾಗಿರುವುದರಿಂದ ಪೊಲೀಸರು ಅದನ್ನು ವಶಕ್ಕೆ ಪಡೆಯಬೇಕಿದೆ.
 ಈ ಹಿನ್ನೆಲೆಯಲ್ಲಿ ರೈಲ್ವೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ರೈಲು ಹಳಿಗಳ ನಿರ್ವಹಣೆ ಮಾಡುವ ರೈಲ್ವೆ ಇಲಾಖೆಯ ಕೀ ಮ್ಯಾನ್‌ಗಳ ಜತೆಗೂಡಿ ಚಾಕು ಇರುವ ಜಾಗವನ್ನು ಶೋಧಿಸುತ್ತಿದ್ದಾರೆ. ಚಾಕು ರೈಲಿನ ಹೊರಗೇ ಬಿದ್ದಿರುವ ಸಾಧ್ಯತೆ ಹೆಚ್ಚಾಗಿರುವುದರಿಂದ ಹುಡುಕಾಟ ತೀವ್ರಗೊಳಿಸಲಾಗಿದೆ.
 ಲಕ್ಷ್ಮೀ ಅವರಿಗೆ ಆಗಿರುವ ಗಾಯಕ್ಕೂ, ಅಂಜಲಿಗೆ ಆಗಿದ್ದ ಗಾಯಕ್ಕೂ ಹೋಲಿಕೆಯಿದೆ. ಆರೋಪಿಯು ಎರಡೂ ಘಟನೆಗಳಿಗೆ ಒಂದೇ ಚಾಕುವನ್ನು ಬಳಸಿರುವ ಸಾಧ್ಯತೆಯಿದೆ ಎನ್ನುತ್ತವೆ ಪೊಲೀಸ್ ಮೂಲಗಳು.
 ...
 (ಬಾಕ್ಸ್)
 ಲಕ್ಷ್ಮೀ ಚಿಕಿತ್ಸೆಗೆ ಬೇಕಿದೆ ನೆರವು
 ನಗರದ ಎಸ್.ಎಸ್. ಆಸ್ಪತ್ರೆಯಲ್ಲಿ ದಾಖಲಾಗಿರುವ ಲಕ್ಷ್ಮೀ ಅವರಿಗೆ ಶುಕ್ರವಾರ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು ಅವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಆದರೆ ಕೈಗೆ ಗಂಭೀರ ಗಾಯ ಆಗಿರುವುದರಿಂದ ಪೂರ್ಣ ಸರಿ ಹೋಗಲು 3 ತಿಂಗಳು ಸಮಯ ಬೇಕಾಗುತ್ತದೆ.
 ಆಸ್ಪತ್ರೆಯ ಚಿಕಿತ್ಸಾ ವೆಚ್ಚ ಭರಿಸುವುದು ಲಕ್ಷ್ಮೀ ಅವರ ಕುಟುಂಬಕ್ಕೆ ಕಷ್ಟವಾಗಿದೆ. ಕೈಯಲ್ಲಿದ್ದ ಹಣ ಖಾಲಿಯಾಗಿದ್ದು ಮುಂದೇನು ಮಾಡಬೇಕು ಎಂಬ ಪ್ರಶ್ನೆ ಎದುರಾಗಿದೆ. ಆಸ್ಪತ್ರೆಯಲ್ಲಿ ಇರುವ ವರೆಗೆ ಊಟ, ತಿಂಡಿಯ ವೆಚ್ಚ ಭರಿಸುವುದೂ ಅವರಿಗೆ ಸಮಸ್ಯೆಯಾಗಿದೆ.
 ಲಕ್ಷ್ಮೀ ಅವರ ಪತಿ ಮಹಾಂತೇಶ್ ಕೂಲಿ ಮಾಡಿ ಜೀವನ ಸಾಗಿಸುತ್ತಾರೆ. ‘3 ದಿನಗಳಿಂದ ಆಸ್ಪತ್ರೆಯಲ್ಲಿದ್ದೇವೆ. ಕೈಯಲ್ಲಿದ್ದ ಒಂದಿಷ್ಟು ಹಣವನ್ನು ಖರ್ಚು ಮಾಡಿಕೊಂಡಿದ್ದೇವೆ. ಆಸ್ಪತ್ರೆಯ ಬಿಲ್ ಪಾವತಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ. ಸರ್ಕಾರ ಅಥವಾ ಸಮಾಜ ನಮ್ಮ ನೆರವಿಗೆ ಬರಬೇಕು’ ಎಂದು ಅವರು ಮನವಿ ಮಾಡಿದ್ದಾರೆ.
 ಎಲ್ಲವೂ ಸರಿಯಾಗಿತ್ತು. ಈ ಅನಿರೀಕ್ಷಿತ ಘಟನೆಯ ನಂತರ ಮುಂದೇನು ಮಾಡಬೇಕೆಂದು ತೋಚುತ್ತಿಲ್ಲ. ಪತ್ನಿಯ ಆರೋಗ್ಯ ನೋಡಿಕೊಳ್ಳಬೇಕು, ಜತೆಗೆ ಕುಟುಂಬ ನಿರ್ವಹಣೆ ಮಾಡುವುದು ಹೇಗೆ ಎಂದು ಮಹಂತೇಶ್ ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net