

ದಾವಣಗೆರೆ : ಜಿಲ್ಲಾ ವರದಿಗಾರರ ಕೂಟದಿಂದ 3ನೇ ವರ್ಷದ ಪಿಪಿಎಲ್-2ಕೆ24ನ್ನು ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಶನಿವಾರ ಮತ್ತು ಭಾನುವಾರ ಹಮ್ಮಿಕೊಳ್ಳಲಾಗಿದೆ ಎಂದು ಕೂಟದ ಅಧ್ಯಕ್ಷ ನಾಗರಾಜ ಎಸ್. ಬಡದಾಳ್ ಹೇಳಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೂಟದ 4 ತಂಡಗಳು ಪ್ರಶಸ್ತಿಗಾಗಿ ಸೆಣಸಿದರೆ, ಆಫಿಷಿಯಲ್ ಕಪ್‌ಗಾಗಿ ನಾಲ್ಕು ತಂಡಗಳು ಪೈಪೋಟಿ ನಡೆಸಲಿವೆ ಎಂದು ತಿಳಿಸಿದರು. ಶನಿವಾರ ಬೆಳಗ್ಗೆ 7.30ಕ್ಕೆ ಎಸ್ಪಿ ಉಮಾ ಪ್ರಶಾಂತ್ ಟೂರ್ನಿ ಉದ್ಘಾಟಿಸುವರು. ಕೂಟದ ಗೌರವಾಧ್ಯಕ್ಷ ಬಿ.ಎನ್. ಮಲ್ಲೇಶ, ನಿಕಟಪೂರ್ವ ಅಧ್ಯಕ್ಷರಾದ ಕೆ. ಏಕಾಂತಪ್ಪ, ಎಂ.ಎಸ್. ವಿಕಾಸ್, ಜಿ.ಎಂ.ಆರ್.ಆರಾಧ್ಯ, ಮಲ್ಲಿಕಾರ್ಜುನ ಕಬ್ಬೂರು, ಬಸವರಾಜ ದೊಡ್ಮನಿ, ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಇ.ಎಂ.ಮಂಜುನಾಥ ಭಾಗವಹಿಸುವರು ಎಂದರು. ಆಫಿಷಿಯಲ್ ಕಪ್‌ಗಾಗಿ ಜಿಲ್ಲಾ ಪೊಲೀಸ್ ತಂಡ ಹಾಗೂ ವರದಿಗಾರರ ಕೂಟದ ಮಧ್ಯೆ ಉದ್ಘಾಟನಾ ಪಂದ್ಯ ನಡೆಯಲಿದೆ. 2ನೇ ಪಂದ್ಯ ಜಿಲ್ಲಾಧಿಕಾರಿ ತಂಡ ಹಾಗೂ ಕೂಟದ ಮತ್ತೊಂದು ತಂಡದ ಜತೆ ನಡೆಯಲಿದೆ. ಭಾನುವಾರ ಬೆಳಗ್ಗೆ 7.30ಕ್ಕೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ 2ನೇ ದಿನದ ಪಂದ್ಯಗಳಿಗೆ ಚಾಲನೆ ನೀಡುವರು. ಇದೇ ಮೊದಲ ಬಾರಿಗೆ ಪಿಪಿಎಲ್-24ಗೆ ನಗದು ಬಹುಮಾನ ನೀಡುತ್ತಿರುವುದು ವಿಶೇಷ ಎಂದು ಹೇಳಿದರು. ಕೂಟದ ಕ್ರೀಡಾ ಕಾರ್ಯದರ್ಶಿ ಮಹೇಶ ಕಾಶೀಪುರ, ಮಹದೇವ ಮಾತನಾಡಿ, ಪ್ರತಿ ತಂಡಕ್ಕೆ ನಾಲ್ವರು ಮಹಿಳಾ ಪತ್ರಕರ್ತರು ಮಾರ್ಗದರ್ಶಕರಾಗಿರುತ್ತಾರೆ ಎಂದರು. ಕೂಟದ ಎಂ.ವೈ. ಸತೀಶ, ಪವನ ಐರಣಿ, ಪಿ.ಎಸ್. ಲೋಕೇಶ, ಆರ್. ರಮೇಶ, ಫ್ರಾಂಚೈಸಿಗಳಾದ ಎನ್.ವಿ. ಬದರೀನಾಥ, ಡಾ.ಸಿ.ವರದರಾಜ, ಮಧು ನಾಗರಾಜ, ಬಿ.ಸಿಕಂದರ್ ಇತರರು ಇದ್ದರು.