

ದಾವಣಗೆರೆ : ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಎಲ್ಲ ವಿಭಾಗಗಳಲ್ಲೂ ಆಯೋಜಿಸುವ ಪ್ರತಿ ಪಂದ್ಯಕ್ಕೂ ‘ಮ್ಯಾನ್ ಆಫ್ ದಿ ಮ್ಯಾಚ್’ ಪ್ರಶಸ್ತಿ ನೀಡಲಾಗುವುದು ಎಂದು ಸಂಸ್ಥೆಯ ಖಜಾಂಚಿ ಇ.ಎಸ್. ಜೈರಾಮ್ ಹೇಳಿದರು. ಕೆಎಸ್‌ಸಿಎ ತುಮಕೂರು ವಿಭಾಗದಲ್ಲಿ 2022-23 ಹಾಗೂ 2023-24ರ ಸಾಲಿನಲ್ಲಿ ಆಯೋಜಿಸಿದ ಎಲ್ಲ ಪಂದ್ಯಗಳ ವಿಜೇತ ತಂಡಗಳಿಗೆ ನಗರದ ಬಾಪೂಜಿ ಎಂಬಿಎ ಕಾಲೇಜು ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಬಹುಮಾನ ವಿತರಣೆ ಸಮಾರಂಭದಲ್ಲಿ ಮಾತನಾಡಿದರು. ಕ್ರಿಕೆಟ್‌ಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತಿ ವಲಯದ ಪ್ರತಿ ಕ್ಲಬ್‌ಗೂ 4 ಡಜನ್ ಬಾಲ್, ಎಲ್ಲ ಕಡೆಗಳಲ್ಲೂ ಕ್ರಿಕೆಟ್ ಅಂಕಣ ಅಭಿವೃದ್ಧಿ ಪಡಿಸಲಾಗುವುದು. ಕ್ರೀಡೆಯ ಪ್ರಿಯರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಮುಂಬೈ-ಬೆಂಗಳೂರು ಕೈಗಾರಿಕಾ ಕಾರಿಡಾರ್ ಪ್ರದೇಶದಲ್ಲಿ ತುಮಕೂರು ಬಳಿ ಸಂಸ್ಥೆಗೆ 40 ಎಕರೆ ಹಾಗೂ ಬಳ್ಳಾರಿಯಲ್ಲಿ 19.4 ಎಕರೆ ಜಮೀನು ಮಂಜೂರಾಗಿದೆ. ಅಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸುವ ಗುರಿಯಿದೆ ಎಂದು ಹೇಳಿದರು. ಯಾವುದೇ ಕ್ರೀಡೆಯಲ್ಲಿ ಗೆಲುವು ಮುಖ್ಯವಲ್ಲ, ತೊಡಗಿಸಿಕೊಳ್ಳುವಿಕೆ ಪ್ರಮುಖವಾಗಿದೆ. ಸೋಲು, ಗೆಲುವನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು. ಕ್ರಿಕೆಟ್ ಅಭ್ಯಾಸ ಮಾಡುತ್ತಿರುವ 16 ಮತ್ತು 18 ವಯೋಮಾನದ ಒಳಗಿನ ಪಟುಗಳು ಓದಿನಲ್ಲೂ ಉತ್ತಮ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು. ಕೆಎಸ್‌ಸಿಎನ ಎಂ.ಎಸ್. ಕೇಶವ ಮಾತನಾಡಿ, ಈ ಬಾರಿ ಬಹುಮಾನದಿಂದ ವಂಚಿತರಾಗಿರುವವರು ಎದೆಗುಂದದೆ, ಮತ್ತಷ್ಟು ಪರಿಶ್ರಮದೊಂದಿಗೆ ಕೌಶಲ ರೂಢಿಸಿಕೊಂಡು ಯಶಸ್ಸು ಕಾಣಬೇಕು. ಜತೆಗೆ ನಿಮ್ಮ ಕೋಚ್ ಹಾಗೂ ಗುರು ಹಿರಿಯರಿಗೆ ಗೌರವ ನೀಡಬೇಕು. ತುಮಕೂರು ವಿಭಾಗ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯ ತುಮಕೂರು ವಿಭಾಗದ ಅಧ್ಯಕ್ಷ ಎಸ್.ಎಸ್. ಬಕ್ಕೇಶ್ ಕ್ರೀಡಾಪಡುಗಳಿಗೆ ಶುಭ ಹಾರೈಸಿದರು. ವಿಭಾಗದ ಸಂಚಾಲಕ ಕೆ. ಶಶಿಧರ್ ವಾರ್ಷಿಕ ವರದಿ ಮಂಡಿಸಿದರು. ಗೋಪಾಲಕೃಷ್ಣ ನಿರೂಪಿಸಿದರು. ಸಂಸ್ಥೆಯ ಸಂಜಯ್ ಪೋಲ್, ಸುನೀಲ್, ಕೆ.ವಿ. ಮಂಜುನಾಥ್ ರಾಜು, ಅಶೋಕ್ ಇದ್ದರು. ತುಮಕೂರು ವಿಭಾಗದಲ್ಲಿ 2022-23 ಹಾಗೂ 2023-24ರ ಸಾಲಿನಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಗಳಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದ ತಂಡಗಳಿಗೆ ಬಹುಮಾನ ವಿತರಿಸಲಾಯಿತು.