

ದಾವಣಗೆರೆ : ದಾವಣಗೆರೆ ಕ್ರಿಕೆಟ್ ಅಕಾಡೆಮಿ ನಗರದಲ್ಲಿ ಕಳೆದ 23 ವರ್ಷಗಳಿಂದ ಅತ್ಯುತ್ತಮ ಕ್ರಿಕೆಟ್ ತರಬೇತಿ ನೀಡುತ್ತಿದೆ ಎಂದು ಅಕಾಡೆಮಿ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಹೇಳಿದರು.
ಅಕಾಡೆಮಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಪ್ರಾರಂಭಗೊಂಡ 23ನೇ ವರ್ಷದ ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ ಉದ್ಘಾಟಿಸಿ, ಮಾತನಾಡಿದರು.
ನಗರದ ಕ್ರೀಡಾಪಟುಗಳು ಉತ್ತಮ ಕ್ರಿಕೆಟ್ ತರಬೇತಿಗೆ ಬೆಂಗಳೂರು ಅಥವಾ ಮೈಸೂರಿಗೆ ಹೋಗಿ ತರಬೇತಿ, ವಸತಿ ಹಾಗೂ ಊಟದ ವೆಚ್ಚ ಭರಿಸಲಾಗದೆ ಅವಕಾಶ ವಂಚಿತರಾಗಿದ್ದರು. ಈಗ ಬೇರೆ ನಗರಗಳಿಗೆ ಹೋಗುವ ಅವಶ್ಯಕತೆ ಇಲ್ಲ ಎಂದು ತಿಳಿಸಿದರು.
ನುರಿತ ಬಿಸಿಸಿಐ ಹಾಗೂ ಕೆಎಸ್‌ಸಿಎ ಮಾನ್ಯತೆ ಪಡೆದ ಕೋಚ್‌ಗಳು ದಾವಣಗೆರೆ ಕ್ರಿಕೆಟ್ ಅಕಾಡೆಮಿಯಲ್ಲಿದ್ದು, ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯವಾಗಿ ಉತ್ತಮ ಕ್ರಿಕೆಟ್ ತರಬೇತಿ ದೊರೆಯಲಿದ್ದು, ಕ್ರೀಡಾಪಟುಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕುಸ್ತಿಯಲ್ಲಿ ಬಂಗಾರದ ಪದಕಗಳ ಪಡೆದಿರುವ ಸಿರಿಗೆರೆಯ ಹಿರಿಯ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀರಾಮ ಪ್ರಭು ಮಾತನಾಡಿ, ಏನನ್ನಾದರೂ ಕಲಿಯಬೇಕು ಎಂದರೆ ಮೊದಲು ಆಸಕ್ತಿ ಇರಬೇಕು. ನಂತರ ದೇಹ ದಂಡಿಸಲು ತಯಾರಿರಬೇಕು. ಆಗ ಅತ್ಯುತ್ತಮ ಕ್ರೀಡಾಪಟು ಆಗಲು ಸಾಧ್ಯ ಎಂದು ಹೇಳಿದರು.
ಶಾಮನೂರು ತಿಪ್ಪೇಶ್, ರವಿ, ಮಂಜುನಾಥ, ವಸಂತ್, ಪಾಲಿಕೆ ಸದಸ್ಯ ಉದಯ್ ಇತರರು ಇದ್ದರು. ಶಿಬಿರದ ತರಬೇತುದಾರರಾದ ಗೋಪಾಲಕೃಷ್ಣ, ತಿಮ್ಮೇಶ್, ಕುಮಾರ್, ಉಮೇಶ್ ಸಿರಿಗೆರೆ, ವೆಂಕಟೇಶ್, ಮನೋಜ್ ಕುಮಾರ್ ತರಬೇತಿ ಪ್ರಾರಂಭಿಸಿದರು.