ಪಟಾಕಿ ವ್ಯಾಪಾರ 4 ಕೋಟಿಗೂ ಹೆಚ್ಚು

dvg-P.C.-Srinivas.jpg
Published on

ರಮೇಶ ಜಹಗೀರದಾರ್ ದಾವಣಗೆರೆ :  ಜಿಲ್ಲೆಯಲ್ಲಿ ಬೆಳಕಿನ ಹಬ್ಬ ದೀಪಾವಳಿಯ ಪಟಾಕಿ ವ್ಯಾಪಾರ ಈ ವರ್ಷ ಭರ್ಜರಿಯಾಗಿದ್ದು, 4 ಕೋಟಿ ರೂ.ಗಳಿಗೂ ಹೆಚ್ಚು ವಹಿವಾಟು ನಡೆದಿದೆ.  ಎರಡು ದಿನ ಮಳೆಯ ಆತಂಕ ಇತ್ತಾದರೂ ಗ್ರಾಹಕರು ಬರುವುದು ಕಡಿಮೆಯಾಗಲಿಲ್ಲ. ಮಳೆ ನಿಂತ ಮೇಲೆ ಬಂದು ಪಟಾಕಿ ಖರೀದಿಸಿದರು. ನೀರು ನಿಂತು, ಕೆಸರಾಗಿದ್ದರೂ ಪಟಾಕಿ ಕೊಳ್ಳುವ ಉತ್ಸಾಹ ಕುಗ್ಗಲಿಲ್ಲ.  ನಗರದ ಹೈಸ್ಕೂಲ್ ಮೈದಾನದಲ್ಲಿ ಒಟ್ಟು 80 ಮಳಿಗೆಗಳನ್ನು ಹಾಕಲಾಗಿತ್ತು. ಕೆಲವರು ಕಡಿಮೆ ಬಂಡವಾಳ ಹೂಡಿದರೆ ಮತ್ತೆ ಕೆಲವರು ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಿದ್ದರು. ಅದಕ್ಕೆ ತಕ್ಕಂತೆ ವ್ಯಾಪಾರವೂ ಆಗಿದೆ.  ಕಡ್ಡಾಯವಾಗಿ ಹಸಿರು ಪಟಾಕಿಗಳನ್ನೇ ಮಾರಾಟ ಮಾಡಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ನರಕ ಚತುರ್ದಶಿಯ ಮುನ್ನಾದಿನವಾದ ಭಾನುವಾರ ಆರಂಭವಾದ ವ್ಯಾಪಾರ ಬುಧವಾರ ರಾತ್ರಿ ಮುಕ್ತಾಯವಾಯಿತು.  ವಿಶೇಷವಾಗಿ ಮಕ್ಕಳು ಪಾಲಕರೊಂದಿಗೆ ಬಂದು ತಮ್ಮ ಆಯ್ಕೆಯ ಪಟಾಕಿಗಳನ್ನು ಖರೀದಿಸಿದರು. ಫ್ಯಾನ್ಸಿ ಐಟೆಂಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಶಾಟ್ಸ್, ಸ್ಪಾರ್ಕಲ್ಸ್, ಸುರ್ ಸುರ್ ಬತ್ತಿಗಳು ಹೆಚ್ಚು ಮಾರಾಟವಾದವು. ಗ್ರಾಹಕರು ಬಣ್ಣ ಬಣ್ಣದ, ವಿವಿಧ ಅಳತೆಯ ಬಾಕ್ಸ್‌ಗಳನ್ನು ಖರೀದಿಸಿದ್ದು ಕಂಡುಬಂದಿತು. ಅದರಲ್ಲೂ ಕೆಲವು ಬ್ರಾೃಂಡ್‌ನ ಗುಣಮಟ್ಟದ ಪಟಾಕಿಗಳನ್ನೇ ಕೇಳಿ ಕೊಂಡುಕೊಂಡರು.  ಬಹುತೇಕ ಅಂಗಡಿಗಳಲ್ಲಿ ಉತ್ತಮ ವ್ಯಾಪಾರವಾಗಿದೆ. ಬಹಳಷ್ಟು ಸಾರ್ವಜನಿಕರು ದೊಡ್ಡ ಮೊತ್ತದ ಖರೀದಿಗೂ ಹಿಂದೇಟು ಹಾಕಲಿಲ್ಲ. ಕೆಲವು ಮಳಿಗೆಗಳಲ್ಲಿದ್ದ ಪಟಾಕಿ ಎಲ್ಲವೂ ಖಾಲಿಯಾಗಿದೆ. ಇದರಿಂದ ವ್ಯಾಪಾರಸ್ಥರು ಖುಷ್ ಆಗಿದ್ದರು.  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net