

ದಾವಣಗೆರೆ : ವಿಶಾಲ ಕರ್ನಾಟಕ ಪಟಾಕಿ ವರ್ತಕರ ಕ್ಷೇಮಾಭಿವೃದ್ಧಿ ಸಂಘದಿಂದ ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ನಗರದ ಹೈಸ್ಕೂಲ್ ಮೈದಾನದಲ್ಲಿ ಅ.30 ರಂದ ನ.2ರ ವರೆಗೆ ಪಟಾಕಿ ಮಾರಾಟ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ದಿನೇಶ್ ಕೆ. ಶೆಟ್ಟಿ ಹೇಳಿದರು. ಪ್ರಸಕ್ತ ವರ್ಷ 74 ಪಟಾಕಿ ಮಾರಾಟ ಮಳಿಗೆ ಸ್ಥಾಪನೆ ಮಾಡಲಾಗಿದ್ದು, ಸರ್ಕಾರದ ನಿಯಮಾವಳಿಯಂತೆ ಯಾರಿಗೂ ತೊಂದರೆ ಆಗದಂತೆ ಕಾನೂನು ಪ್ರಕಾರ ಮಾರಾಟ ಮಾಡಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಜಿಲ್ಲಾಡಳಿತದೊಂದಿಗೆ ಮಾತನಾಡಿ, ಕಾನೂನು ಪ್ರಕಾರ ನಗರದಲ್ಲಿ ಪಟಾಕಿ ಮಾರಾಟಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಪರಿಸರಕ್ಕೆ ಯಾವುದೇ ತೊಂದರೆ ಆಗದಂತೆ ಹಸಿರು ಪಟಾಕಿ ಮಾರಾಟ ನಡೆಯಲಿದೆ ಎಂದರು. ರಾಜ್ಯದಲ್ಲಿ ಒಳ್ಳೆಯ ಮಳೆ, ಬೆಳೆಯಾಗಿದೆ. ಎಲ್ಲ ಕೆರೆ ಹಾಗೂ ಜಲಾಶಯಗಳು ಭರ್ತಿಯಾಗಿವೆ. ಜಿಲ್ಲೆಯಲ್ಲಿ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸೋಣ. ಮಕ್ಕಳು ಪಟಾಕಿ ಹಚ್ಚುವ ಸಂದರ್ಭದಲ್ಲಿ ಹಿರಿಯರು ಜತೆಗಿದ್ದು, ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು. ಸಂಘದ ಅಧ್ಯಕ್ಷ ಪಿ.ಸಿ.ಶ್ರೀನಿವಾಸ್ ಮಾತನಾಡಿ, ಸಚಿವ 2020ರ ನಿಯಮದಡಿ 4 ವರ್ಷದಿಂದ ಹಸಿರು ಪಟಾಕಿ ಮಾರಾಟ ಮಾಡಲು ಆದೇಶವಿದೆ. ದೇಶದಲ್ಲಿ 1500 ಪಟಾಕಿ ಕಂಪನಿಗಳಿದ್ದು, ಎಲ್ಲ ಕಂಪನಿಗಳಲ್ಲೂ ಈ ವರ್ಷ ಪರಿಸರಕ್ಕೆ ಪೂರಕವಾದ ಗ್ರೀನ್ ಪಟಾಕಿ ಬಂದಿವೆ. ಎಲ್ಲ ಮಳಿಗೆಗಳಲ್ಲಿ ಗ್ರಾಹಕರಿಗೆ ಹಸಿರು ಹಾಗೂ ಕ್ಯೂಆರ್ ಕೋಡ್ ಇರುವ ಪಟಾಕಿಗಳೇ ದೊರೆಯಲಿವೆ ಎಂದರು. ರಾಘವೇಂದ್ರ, ಜಗನ್ನಾಥ್, ರಮೇಶ್, ಬಿ.ಎಸ್.ಸಿದ್ದಪ್ಪ, ಹಾಲೇಶಪ್ಪ, ಶಿವು ಐನಹಳ್ಳಿ, ರುದ್ರೇಶ್ ಹೋಲೂರು ಇತರರು ಸುದ್ದಿಗೋಷ್ಠಿಯಲ್ಲಿದ್ದರು.