ಕೋವಿಡ್ ಲಸಿಕೆ; ಆದ್ಯತಾ ಪಟ್ಟಿ ಸಿದ್ಧತೆಗೆ ಸೂಚನೆ

corona (2)
Published on

ದಾವಣಗೆರೆ: ಕೋವಿಡ್ ನಿಗ್ರಹಕ್ಕೆ ಶೀಘ್ರವೇ ಲಸಿಕೆ ಬರುವ ಸಂಭವವಿದೆ. ಸರ್ಕಾರದ ಸೂಚನೆಯಂತೆ ಎರಡು ದಿನದಲ್ಲಿ ಆದ್ಯತಾ ವಲಯದ ಅಂಕಿ ಅಂಶ ಸಿದ್ಧಪಡಿಸಿ, ದೇಶಕ್ಕೆ ಮಾದರಿಯಾಗುವಂತೆ ವಿತರಿಸಲು ವ್ಯವಸ್ಥೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ಸರ್ಕಾರದ ನಿಲುವಿನಂತೆ ಜಿಲ್ಲೆಯ ಸರ್ಕಾರಿ ಹಾಗೂ ಮಾನ್ಯತೆಯುಳ್ಳ ಖಾಸಗಿ ಆಸ್ಪತ್ರೆಗಳ ವೈದ್ಯರು, ನರ್ಸ್‌ಗಳು, ಪ್ರಯೋಗಶಾಲೆ ನಿರ್ವಹಿಸುವವರು, ಚಾಲಕರು, ಕ್ಲರ್ಕ್‌ಗಳು, ಡಿ-ಗ್ರೂಪ್ ಸಿಬ್ಬಂದಿ ಸೇರಿ ಎಲ್ಲ ಆರೋಗ್ಯ ಕಾರ್ಯಕರ್ತರು, ವೈದ್ಯಕೀಯ ಕಾಲೇಜು, ದಂತ ವೈದ್ಯಕೀಯ, ಪ್ಯಾರಾ ಮೆಡಿಕಲ್, ಆಯುರ್ವೇದಿಕ್ ಸೇರಿದಂತೆ ಎಲ್ಲರ ಸಮಗ್ರ ವಿವರ ನೀಡಬೇಕು.

ಪ್ರಥಮ ಹಂತದಲ್ಲಿ ಅವಶ್ಯಕ ಲಸಿಕೆ ಡೋಸ್‌ಗಳ ಸಂಖ್ಯೆಯನ್ನು ವಿವರ ಸಹಿತ ಸಲ್ಲಿಸಬೇಕು. ಪ್ರತಿ ಗುರುವಾರ ಕಾರ್ಯಪಡೆ ಸಮಿತಿ ಸಭೆ ನಡೆಸಿ, ಪರಿಶೀಲನೆ ನಡೆಸಲಾಗುವುದು. ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರತಿ ತಾಲೂಕಿಗೆ ಒಬ್ಬರಂತೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು ಎಂದರು.

ಲಸಿಕೆ ಕಾರ್ಯಕ್ರಮ ಜಾರಿ ಸಂದರ್ಭದಲ್ಲಿ ವದಂತಿ, ತಪ್ಪು ಕಲ್ಪನೆಗಳು ಹರಡದಂತೆ ಎಚ್ಚರವಹಿಸಬೇಕು. ಆರೋಗ್ಯ ಇಲಾಖೆಯು ವಿವಿಧ ಇಲಾಖೆಗಳು, ರೋಟರಿ, ಲಯನ್ಸ್, ಸ್ಕೌಟ್- ಗೈಡ್ಸ್ ಮೊದಲಾದ ಸಮಾಜಮುಖಿ ಸಂಸ್ಥೆಗಳ ಸಹಯೋಗದೊಂದಿಗೆ ಜನ ಜಾಗೃತಿ ಮೂಡಿಸಬೇಕೆಂದು ಹೇಳಿದರು.

ಕೋವಿಡ್ ಪ್ರಮಾಣ ಇಳಿಕೆ: ವೈದ್ಯರು, ಸಿಬ್ಬಂದಿ ಮತ್ತಿತರರ ಉತ್ತಮ ಸೇವೆ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಕೋವಿಡ್ ಸೋಂಕು ಪ್ರಕರಣಗಳಲ್ಲಿ ಇಳಿಕೆಯಾಗಿದೆ. ಜಿಲ್ಲೆಯಲ್ಲಿ ಪಾಸಿಟಿವ್ ಪ್ರಮಾಣ ಶೇ.5ಕ್ಕಿಂತ ಕಡಿಮೆ ಇದೆ. ಗ್ರಾಮೀಣ ಪ್ರದೇಶದಲ್ಲಿ ಶೇ.2.5ಕ್ಕಿಂತ ಕಡಿಮೆ ಆಗಿರುವುದು ಸಮಾಧಾನಕರ ಸಂಗತಿ ಎಂದು ಡಿಸಿ ಹೇಳಿದರು.

ಚಳಿಗಾಲದಲ್ಲಿ ಕೋವಿಡ್ ಪ್ರಕರಣ ಹೆಚ್ಚುವ ಸಂಭವವಿರುವುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದು, ಸಾರ್ವಜನಿಕರು ಇನ್ನಷ್ಟು ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ ಎಂದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಮೀನಾಕ್ಷಿ ಅವರು, ಲಸಿಕಾ ಕಾರ್ಯಕ್ರಮ ಯಶಸ್ವಿ ಜಾರಿಗೆ ಲಸಿಕಾಕರ್ತರನ್ನು ಗುರುತಿಸುವ ಕಾರ್ಯ ಪ್ರಗತಿಯಲ್ಲಿದೆ. ಜಾಗತಿಕವಾಗಿ 248 ಲಸಿಕೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, 10 ಲಸಿಕೆಗಳು ಅಂತಿಮ ಹಂತ ತಲುಪಿವೆ ಎಂದರು.

ಜಿಲ್ಲೆಗೆ ಬೆಳ್ಳಿ ಪ್ರಶಸ್ತಿ: ಆರೋಗ್ಯ ಇಲಾಖೆಯ ವಿವಿಧ ಲಸಿಕಾ ಕಾರ್ಯಕ್ರಮಗಳನ್ನು ಉತ್ತಮವಾಗಿ ಜಾರಿಗೊಳಿಸಿದ್ದರಿಂದ ಜಿಲ್ಲೆಗೆ ದೇಶದಲ್ಲೇ ಬೆಳ್ಳಿ ಪ್ರಶಸ್ತಿ ಬಂದಿದೆ ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಮೀನಾಕ್ಷಿ ಹೇಳಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗರಾಜ್, ಹೆಚ್ಚುವರಿ ಎಸ್ಪಿ ಎಂ.ರಾಜೀವ್ ಹಾಗೂ ಆರೋಗ್ಯ ಇಲಾಖೆ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net