

ದಾವಣಗೆರೆ : ಪೋಕ್ಸೋ ಪ್ರಕರಣಗಳು, ಬಾಲ್ಯವಿವಾಹ ಮತ್ತು ಬಾಲಕಾರ್ಮಿಕತೆ ತಡೆಗಟ್ಟಲು ಸರ್ಕಾರದ ವಿವಿಧ ಇಲಾಖೆಗಳ ನಡುವೆ ಸಮನ್ವಯದ ಅಗತ್ಯವಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸಭಾಂಗಣದಲ್ಲಿ ಬುಧವಾರ, ಬಾಲನ್ಯಾಯ ಕಾಯ್ದೆ, ಮಾನವ ಕಳ್ಳಸಾಗಣೆ ತಡೆ, ಪೋಕ್ಸೋ ಅನುಷ್ಠಾನ ಹಾಗೂ ವಿವಿಧ ಇಲಾಖೆಗಳ ಕಲ್ಯಾಣ ಕಾರ್ಯಕ್ರಮಗಳ ಜಾರಿಯ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ನಿಷೇಧ ಮತ್ತು ಬಾಲ ನ್ಯಾಯ ಕಾಯ್ದೆ ಸೇರಿ ಜನರಿಗಾಗಿ ರೂಪಿಸಲಾದ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಇಲಾಖೆಗಳು ಹೆಚ್ಚು ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಬಾಲ್ಯ ವಿವಾಹದಿಂದ ಮಕ್ಕಳ ಮೇಲಾಗುವ ದೈಹಿಕ, ಸಾಮಾಜಿಕ, ಶೈಕ್ಷಣಿಕ ತೊಂದರೆಗಳ ಬಗ್ಗೆ ತಿಳಿಸಬೇಕು. ಅಪ್ರಾಪ್ತ ವಯಸ್ಸಿನಲ್ಲಿ ವಿವಾಹವಾದರೆ ಮುಂದೆ ಆಗುವ ಸಮಸ್ಯೆಗಳ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದರು.
ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿ, ಕಳೆದ ಜನವರಿಯಿಂದ ಇಲ್ಲಿಯವರೆಗೆ ಬಾಲ್ಯ ವಿವಾಹ ತಡೆ ಬಗ್ಗೆ 25 ದೂರುಗಳು ಸ್ವೀಕೃತವಾಗಿದ್ದು ಅವುಗಳಲ್ಲಿ 22 ತಡೆಗಟ್ಟಲಾಗಿದೆ. ಉಳಿದ ಪ್ರಕರಣಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಶಾಲಾ ಕಾಲೇಜುಗಳ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ನಿಯಂತ್ರಣ ಕುರಿತಂತೆ ಹೆಚ್ಚು ಜಾಗೃತಿ ಮೂಡಿಸಬೇಕು. ಎಲ್ಲ ಶಿಕ್ಷಣ ಸಂಸ್ಥೆ ಮತ್ತು ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ‘ತಂಬಾಕು ಮುಕ್ತ ವಲಯ’ ನಾಮಫಲಕಗಳನ್ನು ಅಳವಡಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ ಮಾತನಾಡಿ, ಮರಣ ಪ್ರಮಾಣಪತ್ರ ಇಲ್ಲವೆಂಬ ಕಾರಣಕ್ಕಾಗಿ ಪೌತಿ ಖಾತೆ ಬದಾಲಾವಣೆ ಮಾಡುತ್ತಿಲ್ಲ. ವಿಧವಾ ವೇತನ ಇನ್ನಿತರ ಸೌಲಭ್ಯಗಳು ಸಿಗುತ್ತಿಲ್ಲ. ಎಷ್ಟು ಜನರಿಗೆ ಇದರಿಂದ ತೊಂದರೆಯಾಗಿದೆ ಎನ್ನುವ ಅಂಕಿ ಅಂಶ ಸಂಗ್ರಹಿಸುವಂತೆ ತಿಳಿಸಿದರು.
ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳನ್ನು ಖಾಸಗಿ ಅನುದಾನಿತ ಕುಟೀರಕ್ಕೆ ಸೇರಿಸುವ ಬದಲಾಗಿ ಸರ್ಕಾರಿ ಬಾಲ ಮಂದಿರದಲ್ಲಿ ದಾಖಲು ಮಾಡಬೇಕು. ಎಲ್ಲ ಇಲಾಖೆಗಳು ಜನರ ಕಲ್ಯಾಣಕ್ಕಾಗಿ ರೂಪಿಸಲಾದ ಯೋಜನೆ, ಸೌಲಭ್ಯಗಳ ಕುರಿತು ಜನಜಾಗೃತಿ ಮೂಡಿಸಬೇಕು ಎಂದು ಹೇಳಿದರು.
ಅಂಗನವಾಡಿ ಕೇಂದ್ರಗಳು ಮತ್ತು ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಗುಣಮಟ್ಟದ ಆಹಾರ ನೀಡಬೇಕು. ಮೂಲಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ತಿಳಿಸಿದರು.
ಜಿ.ಪಂ. ಸಿಇಒ ಸುರೇಶ್ ಬಿ. ಇಟ್ನಾಳ್ ಮಾತನಾಡಿ, ಜಿಲ್ಲೆಯಲ್ಲಿ ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಅಗತ್ಯವಿರುವ ಕಡೆಗಳಲ್ಲಿ ಖಾಸಗಿಯವರಿಂದ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ವೇಶ್ಯಾವಾಟಿಕೆ ನಿಯಂತ್ರಣ ಸಂಬಂಧ ಜನವರಿಯಿಂದ ಮಾರ್ಚ್ ವರೆಗೆ 3 ಪ್ರಕರಣಗಳು ದಾಖಲಾಗಿವೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ. ಸಂತೋಷ್ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಬಾನು ಎಸ್. ಬಳ್ಳಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್, ಡಿಎಚ್‌ಒ ಡಾ. ಷಣ್ಮುಖಪ್ಪ, ಆರ್‌ಸಿಎಚ್ ಅಧಿಕಾರಿ ರೇಣುಕಾರಾಧ್ಯ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ ಕುಮಾರ್ ಇದ್ದರು.