ಹೊಸ ಕಾನೂನು ರಚನೆಗೆ ತಜ್ಞರ ಸಲಹೆ ಅಗತ್ಯ

vakeela.jpg
Published on

ದಾವಣಗೆರೆ : ಹೊಸ ಕಾನೂನು ರಚನೆ ಅಥವಾ ತಿದ್ದುಪಡಿ ಸಂದರ್ಭದಲ್ಲಿ ಸರ್ಕಾರ ಕಾನೂನು ತಜ್ಞರಿಂದ ವಿಶ್ಲೇಷಣಾತ್ಮಕ ಅಧ್ಯಯನ ನಡೆಸಿ ಅವರ ಸಲಹೆ ಪಡೆಯಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಹೇಳಿದರು.
 ಸಂವಿಧಾನ ದಿನಾಚರಣೆ ಅಂಗವಾಗಿ ಜಿಲ್ಲಾ ವಕೀಲರ ಸಂಘದಿಂದ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ರಾಷ್ಟ್ರ ನಿರ್ಮಾಣದಲ್ಲಿ ವಕೀಲರ ಪಾತ್ರ’ ಕುರಿತು ಉಪನ್ಯಾಸ ನೀಡಿದರು.
 ಈಗ ರಾಜಕೀಯ ಅಜೆಂಡಾದಿಂದ ಕಾನೂನು ತರಲಾಗುತ್ತಿದೆಯೇ ಹೊರತು ಜನರ ಹಿತದೃಷ್ಟಿಯಿಂದ ಅಲ್ಲ. ಯಾವುದೇ ಚರ್ಚೆ ಇಲ್ಲದೇ ಈಗಾಗಲೇ ಹಲವು ಮಸೂದೆಗಳು ಮಂಡನೆಯಾಗಿವೆ. ಅವುಗಳನ್ನು ಸದನದಲ್ಲಿ ಮಂಡಿಸುವ ಮೊದಲು ಕಾನೂನು ಕಾಲೇಜುಗಳ ಅಧ್ಯಾಪಕರು ಹಾಗೂ ಬಾರ್ ಕೌನ್ಸಿಲ್ ಒಳಗೊಂಡಂತೆ ತಂಡ ರಚಿಸಿ ಅವರಿಂದ ವಿಶ್ಲೇಷಣಾತ್ಮಕ ಅಧ್ಯಯನ ನಡೆಸಬೇಕು. ಚರ್ಚೆಯ ಬಳಿಕ ಅವರ ಸಲಹೆ ಪಡೆಯಬೇಕು. ಇದರಿಂದ ಉತ್ತಮ ಕಾನೂನುಗಳನ್ನು ತರಬಹುದು. ವಕೀಲರು ಇದರಲ್ಲಿ ಭಾಗಿಯಾಗಬೇಕು ಎಂದು ತಿಳಿಸಿದರು.
 ಜಾತಿ, ಅಪರಾಧ, ಭ್ರಷ್ಟಾಚಾರ ಸಮಾಜಕ್ಕೆ ಶಾಪಗಳಾಗಿದ್ದು, ಜನರು ಮತ ಚಲಾಯಿಸುವಾಗ ಇವುಗಳಿಂದ ದೂರ ಇರಬೇಕು. ಇಂದು ರಾಜಕೀಯದಲ್ಲಿ ಮೌಲ್ಯಗಳು ಇಲ್ಲವಾಗಿದ್ದು, ರಾಷ್ಟ್ರ ನಿರ್ಮಾಣಕ್ಕಾಗಿ ತನು, ಮನ, ಧನಗಳನ್ನು ಅರ್ಪಿಸುವ ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಅಟಲ್‌ಬಿಹಾರಿ ವಾಜಪೇಯಿ ಅವರಂತಹ ರಾಜನೀತಿಜ್ಞರು ಬೇಕಾಗಿದೆ ಎಂದು ಹೇಳಿದರು.
 ಯುವ ವಕೀಲರಲ್ಲಿ ಕೆಲಸದ ಸಂಸ್ಕೃತಿ ಕೊರತೆ ಎದ್ದು ಕಾಣುತ್ತಿದ್ದು, ಕಕ್ಷಿದಾರರಿಗೆ ನಿಮ್ಮ ಮೇಲೆ ನಂಬಿಕೆ ಬರಬೇಕಾದರೆ ಶ್ರಮ ಸಂಸ್ಕೃತಿ ರೂಢಿಸಿಕೊಳ್ಳಬೇಕು. ಕಕ್ಷಿದಾರರೇ ವಕೀಲರಿಗೆ ಅನ್ನದಾತರಾಗಿದ್ದು, ಅವರು ಹಣದ ಜತೆಗೆ ಜ್ಞಾನವನ್ನೂ ನೀಡುತ್ತಾರೆ. ಪ್ರಕರಣಗಳನ್ನು ಅಧ್ಯಯನ ಮಾಡಿ ಅವರಿಗೆ ನ್ಯಾಯ ದೊರಕಿಸಿಕೊಡಬೇಕು. ಹಿರಿಯ ವಕೀಲರು ಕಿರಿಯರಿಗೆ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.
 ವಕೀಲರು ವೈಯಕ್ತಿಕ ಬದುಕಿನ ಜತೆ ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಸತ್ಯವನ್ನು ಹುಡುಕಬೇಕು. ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಸಂವಿಧಾನದ ಬಗ್ಗೆ ಉಪನ್ಯಾಸ ನೀಡಿ ಜಾಗೃತಿ ಮೂಡಿಸಬೇಕು ಎಂದು ಹೇಳಿದರು.
 ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಕ್ರಿಯಾಶೀಲವಾಗಿದ್ದು, ಸುಭದ್ರ ರಾಷ್ಟ್ರ ನಿರ್ಮಾಣ ಮಾಡುವಲ್ಲಿ ವಕೀಲರ ಪಾತ್ರ ದೊಡ್ಡದು. ನನ್ನ ದೇಶ ನನ್ನ ಆತ್ಮ ಎಂಬ ಭಾವನೆ ಬಂದಾಗ ಉತ್ತಮ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ. ಗಾಂಧೀಜಿ ಬ್ರಿಟಿಷರ ವಿರುದ್ಧ ಹೋರಾಟ ಮಾಡುವಾಗ ವಕೀಲರ ಸೈನ್ಯವೇ ಇತ್ತು ಎಂದು ಸ್ಮರಿಸಿದರು.
 ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣವರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್ಕುಮಾರ್, ಸಂಘದ ಕಾರ್ಯದರ್ಶಿ ಎಸ್. ಬಸವರಾಜು, ಉಪಾಧ್ಯಕ್ಷ ಜಿ.ಕೆ.ಬಸವರಾಜ್ ಗೋಪನಾಳ್, ಎ.ಎಸ್.ಮಂಜುನಾಥ್ ಹಾಗೂ ಜಿಲ್ಲೆಯ ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net