

ದಾವಣಗೆರೆ : ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದನ್ವಯ ಸೆ. 13 ರಂದು ಎಲ್ಲ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಡಿ.ಕೆ. ವೇಲಾ ತಿಳಿಸಿದರು. ಬುಧವಾರ ಜಿಲ್ಲಾ ನ್ಯಾಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಡಿಮೆ ವೆಚ್ಚದಲ್ಲಿ ತ್ವರಿತವಾಗಿ ಇಬ್ಬರೂ ಕಕ್ಷಿದಾರರ ಒಪ್ಪಿಗೆಯಂತೆ ಸಮಾಧಾನ ತರುವಂತಹ ತೀರ್ಪು ನೀಡಲು ಜನತಾ ನ್ಯಾಯಾಲಯ ಬಹಳಷ್ಟು ಅನುಕೂಲಕರವಾಗಿದೆ ಎಂದರು. ಲೋಕ ಅದಾಲತ್‌ನಲ್ಲಿ ರಾಜಿಯಾಗುವ ಪ್ರಕರಣಗಳ ಮೇಲೆ ಯಾವುದೇ ಮೇಲ್ಮನವಿ ಹೋಗಲು ಅವಕಾಶ ಇರುವುದಿಲ್ಲ ಮತ್ತು ನ್ಯಾಯಾಲಯದ ತೀರ್ಪಿನಷ್ಟೇ ಮಹತ್ವ ಇರುತ್ತದೆ. ಇದರಿಂದ ಸಮಯ ಹಾಗೂ ಹಣದ ಉಳಿತಾಯವಾಗಲಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಎಲ್ಲ 25 ನ್ಯಾಯಾಲಯಗಳಿಂದ ಒಟ್ಟು 42701 ಪ್ರಕರಣಗಳು ಬಾಕಿ ಇವೆ. ಇದರಲ್ಲಿ 9916 ಪ್ರಕರಣಗಳನ್ನು ಇತ್ಯರ್ಥ ಮಾಡಲು ಗುರಿ ಹೊಂದಲಾಗಿದೆ. ಈಗಾಗಲೇ 2863 ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥ ಮಾಡಿದ್ದು ಅಂತಿಮ ತೀರ್ಪಿನ ವರದಿ ಮಾಡಬೇಕಾಗಿದೆ ಎಂದರು. ಲೋಕ ಅದಾಲತ್‌ಗೆ ರಾಜಿಯಾಗಬಲ್ಲ ಕ್ರಿಮಿನಲ್ ಪ್ರಕರಣ, ಬ್ಯಾಂಕ್ ಪ್ರಕರಣ, ಹಣ ವಸೂಲಾತಿ, ಸಿಬ್ಬಂದಿ ವೇತನ, ಕಾರ್ಮಿಕರ ವಿವಾದ, ವಿದ್ಯುತ್ ಬಿಲ್, ನೀರಿನ ಶುಲ್ಕ, ವೈವಾಹಿಕ ವಿವಾದ, ಭೂ ಸ್ವಾಧೀನ, ಕಂದಾಯ ಪ್ರಕರಣ, ಪಾಲು ವಿಭಾಗ, ಸಂಚಾರ ನಿಯಮಗಳ ಉಲ್ಲಂಘನೆ, ಜನನ ಮತ್ತು ಮರಣ ಸೇರಿದಂತೆ ರಾಜಿಯಾಗಬಲ್ಲ ಪ್ರಕರಣಗಳನ್ನು ಇತ್ಯರ್ಥ ಮಾಡಲಾಗುತ್ತದೆ. ಲೋಕ ಅದಾಲತ್‌ನಲ್ಲಿ ಭಾಗವಹಿಸಿ ಪ್ರಕರಣ ಇತ್ಯರ್ಥ ಮಾಡಿಕೊಳ್ಳಲು ಆಸಕ್ತಿ ಇರುವ ಕಕ್ಷಿದಾರರು ಇದರಲ್ಲಿ ಭಾಗವಹಿಸಲು ಮುಕ್ತ ಅವಕಾಶ ಇದೆ. ಇದರ ಯಶಸ್ಸಿಗೆ ವಕೀಲರ ಸಂಘ, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಹಕಾರ ನೀಡುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದರು. ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಮಾತನಾಡಿ ಕಂದಾಯ ಇಲಾಖೆಯ ನ್ಯಾಯಾಲಯದಲ್ಲಿ ಬಾಕಿ ಇದ್ದ ಪ್ರಕರಣಗಳನ್ನು 90 ದಿನಗಳಲ್ಲಿ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರದ ನಿರ್ದೇಶನದಂತೆ ಪೌತಿ ಖಾತೆ ಆಂದೋಲನ ಪ್ರಾರಂಭಿಸಲಾಗಿದೆ. 92 ಸಾವಿರ ಪಹಣಿಗಳು ಮೃತ ಖಾತೆದಾರರ ಹೆಸರಿನಲ್ಲಿದ್ದು ಕಾನೂನು ಪ್ರಕಾರ ಬದುಕಿರುವ ವಾರಸುದಾರರ ಹೆಸರಿಗೆ ಜಂಟಿ ಖಾತೆ ಮಾಡಲಾಗುತ್ತದೆ ಎಂದು ತಿಳಿಸಿದರು. ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಮಾತನಾಡಿ ಸಂಚಾರ ನಿಯಮ ಉಲ್ಲಂಘನೆ ಮಾಡಿದ ಸುಮಾರು 15 ಸಾವಿರ ಪ್ರಕರಣಗಳನ್ನು ಜಿಲ್ಲೆಯಲ್ಲಿ ಗುರುತಿಸಲಾಗಿದ್ದು ಶೇ 50 ರಷ್ಟು ದಂಡ ಪಾವತಿಯೊಂದಿಗೆ ಸೆ. 12 ರೊಳಗಾಗಿ ಇತ್ಯರ್ಥ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇದರ ಸದುಪಯೋಗ ಮಾಡಿಕೊಳ್ಳಬೇಕೆಂದರು. ವಕೀಲರ ಸಂಘದ ಅಧ್ಯಕ್ಷ ಟಿ.ಆರ್. ಗುರುಬಸವರಾಜ್ ಮಾತನಾಡಿ ಲೋಕ ಅದಾಲತ್‌ಗೆ ಎಲ್ಲ ವಕೀಲರು ಸಲಹೆ ಸಹಕಾರ ನೀಡಿದ್ದಾರೆ ಎಂದರು. ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರಣ್ಣವರ, ವಕೀಲರ ಸಂಘದ ಉಪಾಧ್ಯಕ್ಷ ಕೆ.ಜಿ.ಆರ್. ಸ್ವಾಮಿ, ಕಾರ್ಯದರ್ಶಿ ಎಸ್. ಮಂಜು, ಸಹ ಕಾರ್ಯದರ್ಶಿ ರೇವಣಸಿದ್ದಪ್ಪ ಕೆ.ಎಸ್. ಶಾಗಲೆ, ಖಜಾಂಚಿ ಜಿ.ಇ.ವನಜಾಕ್ಷಿ ಇದ್ದರು.