

ದಾವಣಗೆರೆ : ಮಾ. 8ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಎಲ್ಲರೂ ಕೈಜೋಡಿಸಿ ಹೆಚ್ಚು ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಹೇಳಿದರು. ಜಿಲ್ಲಾ ವಕೀಲರ ಸಂಘದ ಭವನದಲ್ಲಿ ಮಂಗಳವಾರ, ರಾಷ್ಟ್ರೀಯ ಲೋಕ ಅದಾಲತ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಎಲ್ಲರ ಸಹಕಾರದಿಂದ ಈ ಹಿಂದಿನ ಲೋಕ ಅದಾಲತ್‌ಗಳಲ್ಲಿ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. ಕಳೆದ ಲೋಕ ಅದಾಲತ್‌ನಲ್ಲಿ 6492 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಈ ಬಾರಿ ಇನ್ನೂ ಹೆಚ್ಚಿನ ಸಾಧನೆ ಮಾಡೋಣ ಎಂದು ತಿಳಿಸಿದರು. ಹತ್ತು, ಹದಿನೈದು ವರ್ಷಗಳಷ್ಟು ಹಳೆಯ ಕೇಸ್‌ಗಳು ಹೆಚ್ಚೇನೂ ಇಲ್ಲ. ಆದರೂ ವಕೀಲರು ಹಳೆಯ ಪ್ರಕರಣಗಳನ್ನು ಕೈಗೆತ್ತಿಕೊಳ್ಳಬೇಕು. ನ್ಯಾಯಾಂಗದ ಮೇಲೆ ಕಕ್ಷಿದಾರರಿಗೆ ಹೆಚ್ಚು ವಿಶ್ವಾಸವಿದ್ದು, ಕಡಿಮೆ ಸಮಯದಲ್ಲಿ ನ್ಯಾಯ ಒದಗಿಸಿದರೆ ಕಕ್ಷಿದಾರರಿಗೂ ನೆಮ್ಮದಿ ಸಿಗುತ್ತದೆ ಎಂದರು. ಕಲ್ಯಾಣ ರಾಷ್ಟ್ರದಲ್ಲಿ ಎಲ್ಲರೂ ಸಾಮಾಜಿಕವಾಗಿ, ಆರ್ಥಿಕವಾಗಿ, ಆರೋಗ್ಯಕರವಾಗಿ, ಗೌರವಯುತವಾಗಿ ಬದುಕಬೇಕು. ಕೌಟುಂಬಿಕ ಕಲಹದಲ್ಲಿ ನ್ಯಾಯಾಲಯದ ಮೆಟ್ಟಿಲು ಏರಿದ ಮಹಿಳೆಗೆ ಜೀವನಾಂಶ ಕೊಡಿಸಿದರೆ ಗೌರವಯುತವಾಗಿ ಬದುಕಲು ಸಹಕಾರಿಯಾಗುತ್ತದೆ. ಈ ರೀತಿಯ ಸಣ್ಣ ಸಣ್ಣ ವ್ಯಾಜ್ಯಗಳನ್ನು ವಿಲೇವಾರಿ ಮಾಡುವ ಮೂಲಕ ದಾವಣಗೆರೆಯನ್ನು ಕಲ್ಯಾಣ ಜಿಲ್ಲೆಯನ್ನಾಗಿ ಮಾಡೋಣ ಎಂದು ಹೇಳಿದರು. ಮಾ. 8ರಂದೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯೂ ಇದೆ. ಆದ್ದರಿಂದ ಅಂದು ಮಹಿಳಾ ಮತ್ತು ಮಕ್ಕಳ ಪ್ರಕರಣಗಳನ್ನು ಆದಷ್ಟು ಹೆಚ್ಚಾಗಿ ವಿಲೇವಾರಿ ಮಾಡಬೇಕು. ಲೋಕ ಅದಾಲತ್‌ನಲ್ಲಿ ವಿಮಾ ಕಂಪನಿಗಳು, ಸಾಲದ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜಿ ಮೂಲಕ ಬಗೆಹರಿಸಿಕೊಳ್ಳಬಹುದು ಎಂದರು. ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಎಂ. ಕರೆಣ್ಣವರ್ ಮಾತನಾಡಿ, ವಕೀಲರು ಸೋಷಿಯಲ್ ಇಂಜಿನಿಯರ್ ಇದ್ದಂತೆ. ಲೋಕ ಅದಾಲತ್ ಮೂಲಕ ಕಕ್ಷೀದಾರರಿಗೆ ಶೀಘ್ರ ಮತ್ತು ಕಡಿಮೆ ವೆಚ್ಚದಲ್ಲಿ ನ್ಯಾಯದಾನ ವ್ಯವಸ್ಥೆ ಮಾಡಿದರೆ ವಕೀಲರಿಗೂ ಒಳ್ಳೆಯ ಆರ್ಥಿಕ ಫಲ ಸಿಗಲಿದೆ ಎಂದು ತಿಳಿಸಿದರು. ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಂಜಪ್ಪ ಹನುಮಂತಪ್ಪ ಅಣ್ಣಯ್ಯ ಮಾತನಾಡಿ, ಲೋಕ ಅದಾಲತ್ ನಲ್ಲಿ ಪ್ರಕರಣ ಇತ್ಯರ್ಥಗೊಳಿಸಲು ಮನಸ್ಸು, ಇಚ್ಛಾಶಕ್ತಿ, ಮುಂದಾಲೋಚನೆ ಇರಬೇಕು. ಇದರಲ್ಲಿ ವಕೀಲರ ಪಾತ್ರ ಬಹಳ ಮುಖ್ಯ ಎಂದರು. ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರವೀಣ್ ಕುಮಾರ್, ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಾಧೀಶ ಶ್ರೀರಾಮ ನಾರಾಯಣ ಹೆಗಡೆ, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಭೀಮಪ್ಪ ಗಂಗಮ್ಮ ಸಲಗರೆ, ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ನಿವೇದಿತ ಇದ್ದರು. ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಜಿ.ಕೆ.ಬಸವರಾಜ್ ಸ್ವಾಗತಿಸಿದರು. ಕಾರ್ಯದರ್ಶಿ ಎಸ್. ಬಸವರಾಜ ನಿರೂಪಿಸಿದರು. ... (ಕೋಟ್) ಜಿಲ್ಲೆಯ ವಕೀಲರು ತಮ್ಮ ಬಳಿ ಬರುವ ಕಕ್ಷಿಗಾರರಿಗೆ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಯತ್ನ ಮಾಡುತ್ತ ಬಂದಿದ್ದಾರೆ. ಈ ಬಗ್ಗೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಪ್ರಶಂಸನೀಯ ಪತ್ರಗಳು ಕೂಡ ಬಂದಿವೆ. ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ಕೊಡುವ ಮತ್ತು ಸಾರ್ವಜನಿಕರಿಗೆ ಉಪಯೋಗವಾಗುವ ಲೋಕ ಅದಾಲತ್ ಮತ್ತು ಕಾನೂನು ಸೇವೆಗಳ ಪ್ರಕ್ರಿಯೆಗಳಲ್ಲಿ ವಕೀಲರು ಯಾವುದೇ ಹಿಂಜರಿಕೆ ಇಲ್ಲದೇ ಭಾಗವಹಿಸುತ್ತಾರೆ. ಎಲ್.ಎಚ್. ಅರುಣ್ ಕುಮಾರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ