ಲೋಕ ಅದಾಲತ್‌ನಲ್ಲಿ ಒಂದಾದ 31 ಜೋಡಿ

dvg-lok-adalat.jpg
Published on

ದಾವಣಗೆರೆ :  ವಿವಾಹ ವಿಚ್ಛೇದನ ಮತ್ತು ಜೀವನಾಂಶಕ್ಕಾಗಿ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಿಸಿದ್ದ 31 ಜೋಡಿಗಳು, ಶನಿವಾರ ನಡೆದ ಲೋಕ ಅದಾಲತ್‌ನಲ್ಲಿ ಒಂದಾದರು.  ದಾವಣಗೆರೆಯಲ್ಲಿ 28 ಜೋಡಿ, ಹರಿಹರ, ಚನ್ನಗಿರಿ ಮತ್ತು ಜಗಳೂರು ತಾಲೂಕು ನ್ಯಾಯಾಲಯಗಳಲ್ಲಿ ತಲಾ ಒಂದು ಪ್ರಕರಣದಲ್ಲಿ ರಾಜಿ ಸಂಧಾನ ಯಶಸ್ವಿಯಾಯಿತು.  ನಗರದ ಕೌಟುಂಬಿಕ ನ್ಯಾಯಾಲಯ ಆವರಣದಲ್ಲಿ ಆ ಜೋಡಿಗಳಿಗೆ ಸಿಹಿ ಹಂಚಿ ಶುಭ ಹಾರೈಸಲಾಯಿತು. ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಎಂ.ಎಚ್. ಅಣ್ಣಯ್ಯನವರ್, ಮಕ್ಕಳಸ್ನೇಹಿ ನ್ಯಾಯಾಲಯದ ನ್ಯಾಯಾಧೀಶ ಎಸ್.ಎನ್. ಹೆಗಡೆ, ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಎಸ್.ಜಿ. ಸಲಗರೆ, ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣವರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್ ಇದ್ದರು.  ಸಂಧಾನಕಾರರಾದ ಗೀತಾ, ಹಿರಿಯ ವಕೀಲರಾದ ಎಚ್.ಎನ್. ರಾಜಶೇಖರಪ್ಪ, ಎ.ಸಿ. ಜಗದೀಶ್ವರ, ಮಲ್ಲಿಕಾರ್ಜುನ ಕಣವಿ, ಮಂಜುನಾಥ್ ಹಾಜರಿದ್ದರು.  ಜಿಲ್ಲೆಯಲ್ಲಿ ಜಾರಿಯಲ್ಲಿರುವ ಒಟ್ಟು 6,492 ಪ್ರಕರಣಗಳು ಮುಕ್ತಾಯಗೊಂಡು 14.66 ಕೋಟಿ ರೂ. ಪರಿಹಾರ ನಿಗದಿಯಾಯಿತು. ಮತ್ತು 2.46 ಲಕ್ಷ ವ್ಯಾಜ್ಯಪೂರ್ವ ಪ್ರಕರಣಗಳು ಮುಕ್ತಾಯಗೊಂಡು 65.71 ಕೋಟಿ ರೂ. ಹಣದ ವ್ಯವಹರಣೆ, ಸರ್ಕಾರಿ ವಸೂಲಾತಿ ಮತ್ತು ಪರಿಹಾರ ರಾಜಿ ಮೂಲಕ ಮುಕ್ತಾಯಗೊಂಡವು.  ಅಲ್ಲದೇ 51 ಅಪರಾಧಿಕ ಪ್ರಕರಣಗಳು, 187 ಚೆಕ್ ಅಮಾನ್ಯ ಪ್ರಕರಣ, 22 ಬ್ಯಾಂಕ್ ವಸೂಲಾತಿ ಕೇಸ್‌ಗಳು, 31 ಇತರೆ ಹಣ ವಸೂಲಾತಿ, 64 ಅಪಘಾತ ಪರಿಹಾರ, 101 ವಿದ್ಯುತ್ ಕಳ್ಳತನ, 9 ಅಕ್ರಮ ಮರಳು ಗಣಿಗಾರಿಕೆ, 60 ಪಾಲು ವಿಭಾಗಕ್ಕಾಗಿ ದಾಖಲಿಸಿದ ದಾವೆಗಳು, 128 ಜಾರಿ ಅರ್ಜಿಗಳು, ಹಲವು ಕಾರಣಕ್ಕಾಗಿ ದಾಖಲಿಸಿದ 59 ದಾವೆಗಳು ಮತ್ತು ಜೀವನಾಂಶ ಕೋರಿ ದಾಖಲಿಸಿದ್ದ 33 ದಾವೆಗಳು, ಇತರೆ ಪ್ರಕರಣಗಳು ಸೇರಿ ಜಾರಿಯಲ್ಲಿದ್ದ ಒಟ್ಟು 6,492 ಪ್ರಕರಣಗಳು ಇತ್ಯರ್ಥಗೊಂಡವು.  ಜಿಲ್ಲೆಯಾದ್ಯಂತ ಸುಮಾರು 360 ಕ್ಕಿಂತ ಹೆಚ್ಚು ಶಾಲಾ ವಿದ್ಯಾರ್ಥಿಗಳ ಜನನ ಪ್ರಮಾಣ ಪತ್ರಗಳ ಕುರಿತು ಕಂದಾಯ ಇಲಾಖೆ ಮತ್ತು ಮಹಾನಗರ ಪಾಲಿಕೆಯ ಅಧಿಕಾರಿಗಳು ರಾಜಿ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಮತ್ತು ಅವರಿಗೆ ಸರ್ಕಾರದಿಂದ ಬರಬಹುದಾದ ವಿದ್ಯಾರ್ಥಿವೇತನ ಹಾಗೂ ಇತರೆ ಅನುಕೂಲತೆಗಳಿಗೆ ಅನುವು ಮಾಡಿಕೊಟ್ಟಂತಾಯಿತು.  ಇತರೆ ವ್ಯಾಜ್ಯಪೂರ್ವ ಪ್ರಕರಣಗಳಾದ ಬ್ಯಾಂಕ್ ಸಾಲ ವಾಸೂಲಾತಿ, ಕಾರ್ಮಿಕ ವ್ಯಾಜ್ಯ, ನೀರಿನ ಬಾಕಿ ವಸೂಲಾತಿ, ಕಂದಾಯ, ಟ್ರಾಫಿಕ್ ಪ್ರಕರಣ ಸೇರಿದಂತೆ ಒಟ್ಟಾರೆ 2.46 ಲಕ್ಷ ಪ್ರಕರಣಗಳು ಇತ್ಯರ್ಥಗೊಂಡು, ಒಟ್ಟಾರೆ ಎಲ್ಲ ಪ್ರಕರಣಗಳಿಂದ 65.71 ಕೋಟಿ ರೂ. ವಸೂಲಾತಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net